ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಬೇಕೆಂಬ ಬಿ. ವೈ. ವಿಜಯೇಂದ್ರ ಅವರ ಆಸೆ ಈಡೇರಲಿಲ್ಲ!

ಬೆಂಗಳೂರು,ಆ.5- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಬೇಕೆಂಬ ಬಿ. ವೈ. ವಿಜಯೇಂದ್ರ ಅವರ ಆಸೆ ಈಡೇರಲಿಲ್ಲ. ಯಡಿಯೂರಪ್ಪ ಪ್ರಸ್ತಾಪಕ್ಕೆ ಅಷ್ಟಾಗಿ ಮನ್ನಣೆ ನೀಡದ ಹೈಕಮಾಂಡ್, ವಿಜಯೇಂದ್ರ ಅವರಿಗೆ ಸಂಘಟನೆಯಲ್ಲಿ ಮುಂದುವರೆಯುವ ಟಾಸ್ಕ್ ನೀಡಿದೆ.

ಮುಂಬರಲಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸಂಘಟನಾತ್ಮಕ ಕೆಲಸದಲ್ಲಿ ತೊಡಗಿಕೊಳ್ಳುವ ಟಾಸ್ಕ್ ಅನ್ನು ವಿಜಯೇಂದ್ರಗೆ ನೀಡಲು ನಿರ್ಧರಿಸಿದೆ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯೇಂದ್ರ ವರ್ಚಸ್ಸು ಆಧರಿಸಿ ಚುನಾವಣಾ ರಾಜಕೀಯಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ವಿಜಯೇಂದ್ರ ಮನವೊಲಿಕೆ: ಬೊಮ್ಮಾಯಿ ಕಡೆ ಕ್ಷಣದವರೆಗೂ ವಿಜಯೇಂದ್ರ ವಿಚಾರದಲ್ಲಿ ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ. ಆದರೂ, ಹೈಕಮಾಂಡ್ ಒಪ್ಪಿಗೆ ನೀಡಲಿಲ್ಲ. ಕಡೆಯ ಕ್ಷಣದವರೆಗಿನ ಪ್ರಯತ್ನ ಸಫಲವಾಗಲಿಲ್ಲ. ಹೈಕಮಾಂಡ್ ಪಟ್ಟಿ ನೀಡಿದ ನಂತರ ಈ ಸಂಬಂಧ ವಿಜಯೇಂದ್ರ ಜೊತೆ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದು, ಭವಿಷ್ಯದ ಅವಕಾಶ ಕುರಿತು ಭರವಸೆ ನೀಡಿ ಮನವೊಲಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಪುತ್ರ ವಿಜಯೇಂದ್ರಗೆ ಹೊಸ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಡಿಸಿಎಂ ಇಲ್ಲವೆ ಸಚಿವ ಸ್ಥಾನ ಖಚಿತ ಎಂದೇ ಹೇಳಲಾಗಿತ್ತು. ವಿಜಯೇಂದ್ರ ಕೂಡ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದರು.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಖುದ್ದು ಯಡಿಯೂರಪ್ಪ ಅವರೇ ಪುತ್ರ ವಿಜಯೇಂದ್ರರನ್ನು ದೆಹಲಿಗೆ ಕರೆದೊಯ್ದು ಹೈಕಮಾಂಡ್ ನಾಯಕರಿಗೆ ಪರಿಚಯಿಸಿ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಕುರಿತು ಪ್ರಸ್ತಾಪ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ನೂತನ ಸಚಿವ ಸಂಪುಟ ರಚನೆ ವೇಳೆ ಪುತ್ರನ ಪರವಾಗಿ ಯಡಿಯೂರಪ್ಪ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿಲ್ಲ.

ಪಕ್ಷದಲ್ಲಿ ದೊಡ್ಡಮಟ್ಟದ ಗಂಭೀರ ಚರ್ಚೆ ವಿಜಯೇಂದ್ರ ವಿಚಾರದಲ್ಲಿ ನಡೆಯಲಿಲ್ಲ. ಕೇವಲ ಹೆಸರು ಪ್ರಸ್ತಾಪಕ್ಕೆ ಮಾತ್ರ ಸೀಮಿತವಾಗಿದೆ. ಯಡಿಯೂರಪ್ಪ ಕೂಡ ಆಪ್ತರು, ವಲಸಿಗರ ವಿಚಾರದಲ್ಲಿ ಗಟ್ಟಿ ನಿಲುವು ತಳೆಯುವ ಜೊತೆಗೆ ಹೊಸಬರಿಗೆ ಅವಕಾಶ ಮತ್ತು ವಿರೋಧಿಗಳನ್ನು ಸಂಪುಟಕ್ಕೆ ಬಾರದಂತೆ ನೋಡಿಕೊಳ್ಳುವತ್ತ ಹೆಚ್ಚು ಗಮನಹರಿಸಬೇಕಾಯಿತು. ಹೀಗಾಗಿ, ಪುತ್ರನ ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಿಲ್ಲ.

ರೇಣುಕಾಚಾರ್ಯ, ರಾಜೂಗೌಡ ಸೇರಿದಂತೆ ಇನ್ನು ಕೆಲ ಆಪ್ತರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ವಿಜಯೇಂದ್ರಗೆ ಅವಕಾಶ ಕೊಡಿಸಿದಲ್ಲಿ ಪುತ್ರ ವ್ಯಾಮೋಹಕ್ಕೆ ಆಪ್ತರನ್ನು ಬಲಿಕೊಟ್ಟ ಅಪವಾದವನ್ನೂ ಎದುರಿಸುವ ಆತಂಕ ಯಡಿಯೂರಪ್ಪಗೆ ಇತ್ತು ಎಂದು ಹೇಳಲಾಗುತ್ತಿದೆ.

ಹೈಕಮಾಂಡ್ ಜೊತೆಗಿನ ಚರ್ಚೆ ವೇಳೆ, ಸದ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ನಿರ್ವಹಿಸುತ್ತಿರುವ ವಿಜಯೇಂದ್ರ ಮತ್ತಷ್ಟು ಸಮಯ ಆ ಹುದ್ದೆಯಲ್ಲೇ ಮುಂದುವರೆಯಲಿ. ಯುವ ಮೋರ್ಚಾದಿಂದ ರಾಜ್ಯ ಘಟಕಕ್ಕೆ ಬಂದು ಎರಡು ವರ್ಷ ಮಾತ್ರವಾಗಿದ್ದು, ರಾಜಕೀಯ ಅನುಭವ ಪಡೆದುಕೊಳ್ಳಲಿ.

ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ. ಇನ್ನೂ ಯುವಕರಿದ್ದಾರೆ, ಅವಕಾಶ ಸಿಕ್ಕೇ ಸಿಗಲಿದೆ ಎಂದು ಯಡಿಯೂರಪ್ಪನವರ ಮನವೊಲಿಸಲಾಗಿತ್ತು.

ಇದಕ್ಕೆ ಏನೂ ಹೇಳಲು ಸಾಧ್ಯವಾಗದ ಯಡಿಯೂರಪ್ಪ ಪುತ್ರನ ವಿಚಾರದಲ್ಲಿ ಬರಿಗೈಲಿ ದೆಹಲಿಯಿಂದ ವಾಪಸ್ಸಾಗಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಜೊತೆಗಿನ ಚರ್ಚೆ ವೇಳೆಯೂ ಈ ವಿಷಯ ಪ್ರಸ್ತಾಪವಾದರೂ ಪಕ್ಷದಲ್ಲಿ ಹಿರಿತನ, ರಾಜಕೀಯ ಅನುಭವ ಕಡೆಗಣಿಸಿ ವಿಜಯೇಂದ್ರ ಅವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ತಿಳಿಸಿದೆ.

ಸದ್ಯ ಯಾವುದೇ ಚುನಾವಣೆಯನ್ನು ಎದುರಿಸಿಲ್ಲ. ಶಾಸಕರಲ್ಲ, ಪರಿಷತ್ ಸದಸ್ಯರೂ ಅಲ್ಲ. ಹೀಗಿರುವಾಗಿ ಸಂಪುಟದಲ್ಲಿ ಸ್ಥಾನ ನೀಡುವುದು ಒಳ್ಳೆಯ ಬೆಳವಣಿಗೆಯಾಗುವುದಿಲ್ಲ. ಪಕ್ಷದಲ್ಲಿ ಆಂತರಿಕ ಸಮಸ್ಯೆಗಳು ಎದುರಾಗಲಿವೆ ಎಂಬ ಕಾರಣ ನೀಡಿ ವಿಜಯೇಂದ್ರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಯಿತು ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಈ ಸರ್ಕಾರದ ಅವದಿಯಲ್ಲೇ ಪುತ್ರನನ್ನು ರಾಜಕೀಯ ದಡ ಸೇರಿಸುವ ಯಡಿಯೂರಪ್ಪ ಕನಸಿಗೆ ಹಿನ್ನಡೆಯಾಗಿದೆ. ಭವಿಷ್ಯದ ಚುನಾವಣೆವರೆಗೂ ಕಾಯುವ ಅನಿವಾರ್ಯ ಸ್ಥಿತಿ ಎದುರಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ