
ಫೆ.3ರಿಂದ ಏರೋ ಇಂಡಿಯಾ
ಬೆಂಗಳೂರು: ಬರುವ ಫೆ.3 ರಿಂದ 7 ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಏರೋ ಇಂಡಿಯಾ -2021 ನಡೆಯಲಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಏರೋ ಇಂಡಿಯಾದ ಆತಿಥ್ಯವನ್ನು ಕರ್ನಾಟಕವೇ ವಹಿಸಿಕೊಂಡಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಬುಧವಾರ ನಡೆದ ರಾಯಭಾರಿಗಳ ದುಂಡುಮೇಜಿನ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕಳೆದ 12 ಏರ್‍ಶೋ ಆವೃತ್ತಿಗಳಿಗೆ ಕರ್ನಾಟಕ ಆತಿಥೇಯ ರಾಜ್ಯವಾಗಿ ಉತ್ತಮ ಅನುಭವ ಹೊಂದಿದೆ. ಇದೀಗ ಫೆ.3 ರಿಂದ ನಡೆಯಲಿರುವ 13ನೇ ಆವೃತ್ತಿಯ ಮೆಗಾ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2021 ಕಾರ್ಯಕ್ರಮಕ್ಕೆ ಕರ್ನಾಟಕವೇ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದರು.
ಹೂಡಿಕೆದಾರರಿಗೆ ವಿಶೇಷ ಸಹಾಯಧನ
ಭಾರತದ ವೈಮಾನಿಕ ಮತ್ತು ಬಾಹ್ಯಾಕಾಶ ಉದ್ಯಮಕ್ಕೆ ಕರ್ನಾಟಕ ರಾಜ್ಯ ಶೇ. 25 ರಷ್ಟು ಕೊಡುಗೆ ನೀಡುತ್ತಿದೆ. ಭಾರತದ ವೈಮಾನಿಕ ಸಂಬಂತ ರಫ್ತಿಗೆ ಶೇ.65 ರಷ್ಟು ಹಾಗೂ ರಕ್ಷಣಾ ವಲಯದ ಸೇವೆಗಳಿಗಾಗಿ ಹೆಲಿಕಾಪ್ಟರ್ ಮತ್ತು ವಿಮಾನ ಉತ್ಪಾದನೆಗೆ ಶೇ.67 ಕೊಡುಗೆ ನೀಡುತ್ತಿದೆ. ರಾಷ್ಟ್ರದಲ್ಲಿ ಏರೋಸ್ಪೇಸ್ ನೀತಿಯನ್ನು ರೂಪಿಸಿದ ಮೊಟ್ಟಮೊದಲ ರಾಜ್ಯ ಕರ್ನಾಟಕ. ಎಚ್‍ಎಎಲï, ಬೆಮೆಲï, ಬಿಇಎಲ್ ನಂತಹ ಪ್ರಮುಖ ಸಾರ್ವಜನಿಕ ವಲಯದ ಘಟಕಗಳು ಬೆಂಗಳೂರಿನಲ್ಲಿ ಸ್ಥಾಪಿತಗೊಂಡಿವೆ. ಪ್ರಾದೇಶಿಕ ನಾಗರಿಕ ವಿಮಾನಯಾನ ಸೌಲಭ್ಯಗಳು ಮತ್ತು ನಿರ್ವಹಣೆ ಮತ್ತು ದುರಸ್ತಿ ಕೇಂದ್ರ ಸ್ಥಾಪನೆಗೆ ವಿಶೇಷ ಸಹಾಯಧನವನ್ನು ಹೂಡಿಕೆದಾರರಿಗೆ ಕರ್ನಾಟಕ ಒದಗಿಸುತ್ತಿದೆ ಎಂದು ಹೇಳಿದರು.