ಯಡಿಯೂರಪ್ಪ ಅವರಿಗೆ ಬುದ್ದಿ ಭ್ರಮಣೆಯಾಗಿದೆ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಫೆ.25- ಯಲಹಂಕ ವಾಯುನೆಲೆಯಲ್ಲಿ ಬೆಂಕಿ ಅವಘಡಕ್ಕೆ ರಾಜ್ಯ ಸರ್ಕಾರ ನೇರ ಹೊಣೆ ಎಂದು ಹೇಳಿಕೆ ನೀಡಿರುವ ಬಿಎಸ್‍ವೈ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೆರೇಗೌಡ ಅವರ ಬೆಂಗಳೂರಿನ ಬಂಗಲೆಯಲ್ಲಿ ಇಂದು ಏರ್ಪಡಿಸಲಾದ ಉಪಹಾರ ಕೂಟದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಕಿಡಿಕಾರಿದ್ದು ಹೀಗೆ.

ಅದು ರಕ್ಷಣಾ ಇಲಾಖೆಯ ಕಾರ್ಯಕ್ರಮ:
ಅದೇಗೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡ್ತಾರೆ ? ಸಿಎಂಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿದ್ರು. ಹೀಗಾಗಿ ಕಾರ್ಯಕ್ರಮಕ್ಕೆ ಹೋಗಿದ್ದರು ಅಷ್ಟೇ. ಟೀಕೆ ಮಾಡಬೇಕೆಂದು ಮಾಡೋದು ಬೇಡ. ಯಡಿಯೂರಪ್ಪ ಒಬ್ಬ ಸೀನಿಯರ್ ರಾಜಕಾರಣಿ. ಈ ರೀತಿ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಯಡಿಯೂರಪ್ಪ ಗೆ ಬುದ್ದಿ ಭ್ರಮಣೆ ಆಗಿದೆ. ಅದಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ.

ಇನ್ನು ಬೆಂಕಿ ಅವಘಡಕ್ಕೂ, ಪುಲ್ವಾಮಾ ಘಟನೆಗೂ ಲಿಂಕ್ ಇದೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವರು, ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಸಚಿವರು ಇದ್ದಾರೆ. ಅವರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಲಿ ಎಂದರು.

ದಲಿತರಿಗೆ ಸೂಕ್ತ ಸ್ಥಾನಮಾನ:
ಸಿಎಂ ಸ್ಥಾನ ತಪ್ಪಿಸಿರುವ ಬಗ್ಗೆ ಡಿಸಿಎಂ ಪರಮೇಶ್ವರ್ ಹೇಳಿಕೆಗೆ ಡಿಕೆಶಿ ಸ್ಪಷ್ಟನೆ ನೀಡಿದ್ದು, ನಮ್ಮ ಪಕ್ಷದಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನ. ಇಡೀ ದೇಶದಲ್ಲಿ ಎಸ್ಸಿ, ಎಸ್ಟಿ ಕಾಯ್ದೆ ಮಾಡಿಲ್ಲ. ನಮ್ಮಲ್ಲಿ ಮಾತ್ರ ಮಾಡಿದ್ದೀವಿ.

ಖರ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ಹಾಗೂ ಪರಮೇಶ್ವರ್ ಡಿಸಿಎಂ, ಸಚಿವರಾಗಿದ್ದಾರೆ. ದಲಿತ ಸಮುದಾಯದ ಎಲ್ಲ ಉಪಸಮುದಾಯದ ಮುಖಂಡರಿಗೂ ಸ್ಥಾನ ಕೊಟ್ಟಿದೀವಿ. ನಮ್ಮಲ್ಲಿ ಸಮಸ್ಯೆ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಲೋಕಸಭಾ ಚುನಾವಣಾ ಟಿಕೆಟ್ ಹಂಚಿಕೆ ಸಂಬಂಧ ಯಾವುದೇ ಗೊಂದಲ ಇಲ್ಲ. ನಮ್ಮಲ್ಲಿ ಸೀಟು ಹಂಚಿಕೆ ಬಗ್ಗೆ ಗೊಂದಲ ಇಲ್ಲ. ಎರಡೂ ಪಕ್ಷಗಳು ಸೇರಿ ಚುನಾವಣೆ ಎದುರಿಸ್ತೇವೆ. ಕಾಂಗ್ರೆಸ್ ಯಾವಾಗಲೂ ದಲಿತರ ಹಿತ ಕಾಯುತ್ತಿದೆ ಎಂದರು.

ಸುಮಲತಾ ಮನವೊಲಿಕೆಯ ಸುಳಿವು:
ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಗಮನ ಸೆಳೆದಿರುವ ಮಂಡ್ಯ ರಾಜಕಾರಣ ಹಾಗೂ ಸುಮಲತಾ ಅವರ ರಾಜಕೀಯ ಪ್ರವೇಶ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು ಹೇಳಿದ್ದಿಷ್ಟು.

ಮಂಡ್ಯದಲ್ಲಿ ಈಗಾಗಲೇ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ. ಹಾಗಾಗಿ ಅಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತದೆ. ಸುಮಲತಾ ಅಂಬರೀಶ್ ರಾಜಕೀಯಕ್ಕೆ ಬರುವುದಾದರೆ ಸಾಕಷ್ಟು ಅವಕಾಶಗಳಿವೆ. ಅವರ ಮನವೊಲಿಸುವ ಕೆಲಸ ನಮ್ಮ ನಾಯಕರು ಮಾಡ್ತಾರೆ. ಕಾರ್ಯಕರ್ತರು ಒತ್ತಡ ಹಾಕಬಹುದು ಅವರ ಜೊತೆ ನಮ್ಮ ನಾಯಕರು ಮಾತುಕತೆ ನಡೆಸುತ್ತಾರೆ. ಕಾರ್ಯಕರ್ಯರಿಗೆ ಬುದ್ಧಿ ಹೇಳ್ತೀವಿ. ಸುಮಲತಾ ಅವರಿಗೂ ಪರಿಸ್ಥಿತಿ ವಿವರಿಸಿದ್ದೇವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ