ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ, 4 ದಿನ ವ್ಯಾಪಕ ಮಳೆ

ಬೆಂಗಳೂರು: ಬಂಗಾಳ ಉಪ ಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ 160 ಮಿ.ಮೀ ಮಳೆ ದಾಖಲಾಗಿದೆ.

ಶುಕ್ರವಾರ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ಕಲಬುರಗಿ ಯಲ್ಲಿ 110 ಮಿ.ಮೀ., ಮಂಗಳೂರು, ಸುಬ್ರಹ್ಮಣ್ಯ, ಬೆಳಗಾವಿಯಲ್ಲಿ ತಲಾ 70 ಮಿ.ಮೀ ಮಳೆಯಾಗಿದೆ.

ವಾಯುಭಾರ ಕುಸಿತದಿಂದಾಗಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜು.14ರವರೆಗೆ ವ್ಯಾಪಕ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಭಾರೀ ಮಳೆ ಮುನ್ಸೂಚನೆ ಇರುವುದರಿಂದ ಜು. 11ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಜು. 12 ಮತ್ತು 13 ರಂದು ಆರೇಂಜ್ ಅಲರ್ಟ್ ಹಾಗೂ ಜು. 14 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟ, ವಿಜಯಪುರ, ಯಾದಗಿರಿ, ರಾಯಚೂರು, ಬೀದರ್, ಕಲಬುರಗಿ ಹಾಗೂ ಚಾಮರಾಜನಗರದಲ್ಲಿ ಭಾರೀ ಮಳೆ ನಿರೀಕ್ಷಿಸಿರುವುದರಿಂದ ಜು. 14ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ .

ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ
ರಾಜ್ಯದ 13 ಜಲಾಶಯಗಳು 860 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿದ್ದು, ಜು.10 ರೊಳಗೆ 381 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 44 ಟಿಎಂಸಿ ನೀರು ಹೆಚ್ಚಾಗಿ ಸಂಗ್ರಹವಾಗಿದೆ. ಎಲ್ಲ ಜಲಾಶಯಗಳಿಗೆ 31850 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, 16527 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

ಕಲಬುರಗಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಹಳ್ಳ, ಕೊಳ್ಳ, ನದಿ, ಕೆರೆಗಳು ಭಾಗಶಃ ಭರ್ತಿಯಾಗಿದ್ದು, ಪ್ರಸ್ತುತ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುವ ಸಾಧ್ಯತೆ ಇದೆ. ಇತ್ತೀಚಿಗೆ ಶ್ರೀರಾಘವೇಂದ್ರ ಸ್ವಾಮಿ ರಾಯರ ಮಠಕ್ಕೆ ಮಳೆ ನೀರು ನುಗ್ಗಿದ್ದು, ಇಂತಹ ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲಾಡಳಿತಗಳು ನದಿ ಪಾತ್ರದ ಜನರಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಶುಕ್ರವಾರ ರಾತ್ರಿ ಕಲಬುರಗಿಯಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಯಾವ ಜಲಾಶಯದಲ್ಲಿ ಎಷ್ಟು ನೀರು (ಟಿಎಂಸಿಗಳಲ್ಲಿ)?

ಜಲಾಶಯ              ಸಂಗ್ರಹ ಸಾಮಥ್ರ್ಯ          ಪ್ರಸ್ತುತ           ಕಳೆದ ವರ್ಷ

ಲಿಂಗನಮಕ್ಕಿ                  151.75                   61.29              32.9
ಸೂಪ                           145.33                  26.29             42.7
ವರಾಹಿ                            31.10                   4.40              5.00
ಹಾರಂಗಿ                            8.50                   4.51              5.87
ಹೇಮಾವತಿ                      37.10                 17.58            14.56
ಕೆಆರ್‍ಎಸ್                      49.45                 15.21            25.13
ಕಬಿನಿ                               19.52                 14.61            11.66
ಭದ್ರಾ                               71.54                 38.18           30.51
ತುಂಗಭದ್ರಾ                   100.86                 35.79           15.32
ಘಟಪ್ರಭಾ                          51                      25.28           17.34
ಮಲಪ್ರಭಾ                       37.73                  19.31            13.90
ಆಲಮಟ್ಟಿ                       123.08                 91.40           84.46
ನಾರಾಯಣಪುರ                33.31                 27.05           23.35
ಒಟ್ಟು                          860.27            381.88       322.72

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ