ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವಿದ್ದಾಗ ಬಹಳಷ್ಟು ಭಾರತೀಯರಿಗೆ ಕಂಟಕ ಪ್ರಾಯವಾಗಿ ಪರಿಣಮಿಸಿದ್ದ ಎಚ್-4 ವೀಸಾ ಹೊಂದಿರುವವರಿಗೆ ಕೆಲಸದ ಅಕಾರವನ್ನು ರದ್ದು ಪಡಿಸುವ ನಿಯಮವನ್ನು ಅಧ್ಯಕ್ಷ ಜೊ ಬೈಡನ್ ಹಿಂಪಡೆದಿದ್ದಾರೆ.
ನೂತನ ಅಧ್ಯಕ್ಷರ ಈ ಮಹತ್ವದ ನಿರ್ಧಾರವು ದೇಶದಲ್ಲಿ ಎಚ್-1ಬಿ ಕೆಲಸದ ವೀಸಾ ಆಧಾರದಲ್ಲಿ ನೆಲೆಸಿರುವ ಸಾಕಷ್ಟು ವಿದೇಶಿಗರ ಪತ್ನಿಯರೂ ಇನ್ನು ಮುಂದೆ ದುಡಿಯಲು ಅವಕಾಶ ನೀಡಲಿದೆ. ಮುಖ್ಯವಾಗಿ ಇದು ಬೃಹತ್ ಸಂಖ್ಯೆಯ ಭಾರತೀಯ ಮಹಿಳಾ ವೃತ್ತಿಪರರಿಗೆ ಸಹಕಾರಿಯಾಗಲಿದೆ.
ಅದರಂತೆ, ಅಮೆರಿಕ ನಾಗರಿಕ ಮತ್ತು ವಲಸೆ ಸೇವೆ(ಯುಎಸ್ಸಿಐಎಸ್)ಗಳಿಂದ ಎಚ್-1ಬಿ ವೀಸಾದಾರರ ಕುಟುಂಬ ಸದಸ್ಯರಿಗೆ (ಪತ್ನಿ ಮತ್ತು 21 ವರ್ಷದೊಳಗಿನ ಮಕ್ಕಳಿಗೆ) ಎಚ್-4 ವೀಸಾ ವಿತರಿಸಲಾಗುತ್ತದೆ. ಎಚ್-1ಬಿ ವೀಸಾದಾರರ ಪೈಕಿ ಬಹುತೇಕರು ಭಾರತೀಯ ಮಾಹಿತಿ ತಂತ್ರಜ್ಞಾನ ವೃತ್ತಿಪರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೈಡನ್ ಅವರು ಟ್ರಂಪ್ ಅವರ ಆಡಳಿತದಲ್ಲಿದ್ದ ಈ ಮಹತ್ವದ ನಿಯಮ ಹಿಂಪಡೆದಿರುವುದರಿಂದ ಎಚ್-4 ವೀಸಾ ಹೊಂದಿರುವ ಭಾರತೀಯ ವೃತ್ತಿಪರ ಮಹಿಳೆಯರಿಗೆ ಅನುಕೂಲವಾಗಲಿದೆ.
ಎಚ್-1ಬಿ ವೀಸಾ ವಲಸೆರಹಿತ ವೀಸಾ ಆಗಿದ್ದು, ಅಮೆರಿಕ ಕಂಪನಿಗಳು ವಿದೇಶಿ ಕಾರ್ಮಿಕರನ್ನು ಮುಖ್ಯವಾಗಿ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತರ ಅಗತ್ಯವಿರುದ್ಧ ವಿಶೇಷ ಉದ್ಯೋಗಗಳಿಗೆ ನೇಮಿಸಿಕೊಳ್ಳಲು ಅನುವು ಮಾಡುತ್ತದೆ. ಅದರಂತೆ, ಅಮೆರಿಕದ ತಂತ್ರಜ್ಞಾನ ಕಂಪನಿಗಳು ಪ್ರತಿ ವರ್ಷ ಭಾರತ ಮತ್ತು ಚೀನಾದಂತಹ ರಾಷ್ಟ್ರಗಳ ಸಾವಿರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ.