ಕೆನಡಾ ಪ್ರಧಾನಿ ಟ್ರುಡೋಗೆ ಮಾಜಿ ರಾಯಭಾರಿಗಳ ಛೀಮಾರಿ ವೋಟ್‍ಬ್ಯಾಂಕ್‍ಗಾಗಿ ಭಾರತ ವಿರೋ ಹೇಳಿಕೆ ಸಲ್ಲ

ಹೊಸದಿಲ್ಲಿ : ಭಾರತದ ರೈತರ ಪ್ರತಿಭಟನೆ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿರುವ ಹೇಳಿಕೆ ತೀರಾ ಅಸಂಬದ್ಧ ,ಅನಪೇಕ್ಷಿತ, ವಾಸ್ತವಕ್ಕೆ ದೂರವಾದುದು ಹಾಗೂ ಬೆಂಕಿಗೆ ತುಪ್ಪ ಸುರಿಯುವ ಉದ್ದೇಶದ್ದಾಗಿದೆ . ಇದು ಇನ್ನೇನಲ್ಲ , `ಕೆನಡಾದ ವೋಟ್‍ಬ್ಯಾಂಕ್ ಪಾಲಿಟಿಕ್ಸ್ ‘ಎಂದು ಮಾಜಿ ಭಾರತೀಯ ರಾಯಭಾರಿಗಳ ಸಮೂಹವು ಬಹಿರಂಗ ಪತ್ರದಲ್ಲಿ ಕಟುವಾಗಿ ಟೀಕಿಸಿದೆ.
ಕಳೆದ ವಾರ ಗುರುನಾನಕ ಜಯಂತಿಯಂದು ಸಿಖ್ಖ ಸಮುದಾಯದ ಜೊತೆ ಸಂವಾದ ನಡೆಸಿದ್ದ ಕೆನಡಾ ಪ್ರಧಾನಿ ಟ್ರುಡೋ, ಭಾರತದಲ್ಲಿ ಪರಿಸ್ಥಿತಿ ಗಂಭೀರವಾಗಿದೆ, ನಾವೆಲ್ಲ ಭಾರತದಲ್ಲಿರುವ ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಬಗ್ಗೆ ತೀರಾ ಕಳವಳ ಹೊಂದಿದ್ದೇವೆಂದು ಹೇಳಿದ್ದರು. ಲಿಬರಲ್ ಪಕ್ಷದ ನಿರ್ದಿಷ್ಟ ಮತಬ್ಯಾಂಕ್‍ನ ತುಷ್ಟೀಕರಣಕ್ಕಾಗಿ ಪ್ರಧಾನಿ ಟ್ರುಡೋ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ, ಸುಳ್ಳು ಮಾಹಿತಿ ನೀಡಿರುವುದು ತೀರಾ ಅನಪೇಕ್ಷಿತ ಎಂದು ಪತ್ರದಲ್ಲಿ ಛೀಮಾರಿ ಹಾಕಲಾಗಿದೆ.
ಟ್ರುಡೋ ವರ್ತನೆ ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧಗಳ ಮೇಲೆ ದೂರಗಾಮಿ ಪರಿಣಾಮ ಬೀರುವುದು ಖಂಡಿತ ಎಂದು ಪತ್ರಕ್ಕೆ ಸಹಿ ಹಾಕಿರುವ 22 ಮಾಜಿ ರಾಯಭಾರಿಗಳೂ ಎಚ್ಚರಿಸಿದ್ದಾರೆ.
ಟ್ರುಡೋ ಠಕ್ಕುತನ ಬಯಲಿಗೆ
ಕೃಷಿಕರ ಪರವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೆ ಜಾರಿಗೊಳಿಸಿರುವ ಕನಿಷ್ಠ ಬೆಂಬಲ ಬೆಲೆ ಪದ್ಧತಿ(ಎಂಎಸ್‍ಪಿ)ಗೆ ಡಬ್ಲ್ಯುಟಿಓದಲ್ಲಿ ತೀವ್ರ ವಿರೋಧ- ಖಂಡನೆ ವ್ಯಕ್ತಪಡಿಸಿದ್ದ ಟ್ರುಡೋ, ಆದರೀಗ ಭಾರತದ ಪ್ರತಿಭಟನಾ ನಿರತ ಗುಂಪುಗಳ ಬೇಡಿಕೆಯನ್ನು ಬೆಂಬಲಿಸುತ್ತಿರುವುದು ದ್ವಂದ್ವ ನಡವಳಿಕೆಯಾಗಿದೆ ಎಂದು ಮಾಜಿ ರಾಯಭಾರಿಗಳು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಸಮಸ್ಯೆಯನ್ನು ಸೌಹಾರ್ದಯುತ ಬಗೆಹರಿಸುವ ಬಗ್ಗೆ ಪೂರ್ಣ ಭರವಸೆ ಹೊಂದಿದ್ದು, ಸಚಿವಾಲಯ ಮಟ್ಟದಲ್ಲಿ ರೈತ ಮುಖಂಡರ ಜತೆ ಮಾತುಕತೆ ಮುಂದುವರೆಸಿದೆ. ಆದರೆ ಕೆನಡಾ ಪ್ರಧಾನಿ ಟ್ರುಡೋ ಈ ವಾಸ್ತವವನ್ನು ಉದ್ದೇಶಪೂರ್ವಕ ಮರೆಮಾಚಿರುವುದು ತೀರಾ ನಾಚಿಕೆಗೇಡು ಎಂದು ರಾಯಭಾರಿಗಳು ಟೀಕಿಸಿದ್ದಾರೆ.
ಭಾರತದಲ್ಲಿ ಕೆನಡಾದ ಹೂಡಿಕೆಗಳು ಸಖತ್ ಸುಸ್ಥಿತಿಯಲ್ಲಿವೆ. ಆದರೆ ಅಲ್ಲಿನ ಕೆಲವು ರಾಜಕೀಯ ಪಕ್ಷಗಳ ವೋಟ್‍ಬ್ಯಾಂಕ್ ನೀತಿ ಮಾತ್ರ ಎರಡೂ ದೇಶಗಳ ರಾಜಕೀಯ ಸಂಬಂಧಗಳ ಮೇಲೆ ಒತ್ತಡ ಅಥವಾ ಋಣಾತ್ಮಕ ಪರಿಣಾಮ ಬೀರೋ ಸಾಧ್ಯತೆಗಳನ್ನು ಅಲ್ಲಗಳೆಯೋ ಹಾಗಿಲ್ಲ ಎಂದು ಎಚ್ಚರಿಸಿದೆ ಮಾಜಿ ರಾಯಭಾರಿ ಸಮೂಹ.
ಕಾದಿದೆ ದೂರಗಾಮಿ ಗಂಡಾಂತರ
ಪ್ರತ್ಯೇಕತಾವಾದಿಗಳು, ಖಲಿಸ್ಥಾನಿಗಳು ಕೆನಡಾದಲ್ಲಿದ್ದುಕೊಂಡೇ ಭಾರತ ವಿರೋ ಚಟುವಟಿಕೆಗಳಲ್ಲಿ ತೊಡಗಿದ್ದರೂ ,ಕೆನಡಾ ಸರಕಾರ ಈ ವಿಚಾರವಾಗಿ ತೀರಾ ನಿರ್ಲಕ್ಷ್ಯ ವಹಿಸಿರುವುದು ತೀರಾ ತಪ್ಪು. ಖಲಿಸ್ಥಾನಿಗಳು ಕೆನಡಾದ ಯುವಕರ ತಲೆಗೂ ಉಗ್ರವಾದವನ್ನೇ ತುಂಬುತ್ತಿದ್ದು, ಇದು ದೂರಗಾಮಿ ಕೆಟ್ಟ ಪರಿಣಾಮಗಳನ್ನು ಸೃಜಿಸುವ ಅಪಾಯವಿದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಹಲವು ಪ್ರಮುಖ ಗುರುದ್ವಾರಗಳು ಕೆನಡಾದ ಖಲಿಸ್ಥಾನಿಗಳ ಹಿಡಿತದಲ್ಲಿವೆ. ಗುರುದ್ವಾರಗಳಿಂದ ಪ್ರತ್ಯೇಕತಾವಾದಿಗಳಿಗೆ ಸಖತ್ ಆದಾಯ ಸಿಗುತ್ತಿದೆ. ಕೆಲವು ಗುರುದ್ವಾರಗಳಂತೂ ರಾಜಕೀಯ ಪಕ್ಷಗಳ ಮುಖ್ಯವಾಗಿ ಲಿಬರಲ್ ಪಕ್ಷದ ಚುನಾವಣಾ ಪ್ರಚಾರ ಅಡ್ಡೆಗಳಾಗಿ ಪರಿಣಮಿಸಿವೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಕೆನಡಾದ ಒಟ್ಟು ಜನಸಂಖ್ಯೆಯ ಪೈಕಿ ಶೇ. 5 ಕ್ಕೂ ಅಕ ಪ್ರಜೆಗಳು ಭಾರತೀಯರು. ಅಂದರೆ ಭಾರತೀಯರ ಪ್ರಮಾಣ 20ಲಕ್ಷಗಳಷ್ಟಿದೆ. ಇದರಲ್ಲಿ ಸಿಖ್ಖರ ಸಂಖ್ಯೆ ಬರೋಬ್ಬರಿ 700,000ದಷ್ಟಿದೆ.ಈ ಪೈಕಿ ಕೆಲವು ಭಾರೀ ಆರ್ಥಿಕ ಕುಳಗಳು ಖಲಿಸ್ಥಾನಿಗಳ ಪ್ರಭಾವಕ್ಕೆ ಸಿಲುಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ