ಬೆಂಗಳೂರು: ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಶುಕ್ರವಾರ(ಜ.1)ರಿಂದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಸಂಭ್ರಮ ಕಳೆಗಟ್ಟಿದೆ.
ಈಗಾಗಲೇ ಮಕ್ಕಳನ್ನು ಸ್ವಾಗತಿಸಲು ಅನೇಕ ಶಾಲೆಗಳಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಳಿರು ತೋರಣ, ರಂಗೋಲಿ ಚಿತ್ತಾರ, ಬ್ಯಾಂಡ್ ಸೆಟ್, ಹೂವು ಕೊಟ್ಟು ಬರ ಮಾಡಿಕೊಳ್ಳುವುದು ಹೀಗೆ ಅನೇಕ ರೀತಿಯಿಂದ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಂಭ್ರಮದಿಂದ ಶಾಲೆಗಳು ಪುನಾರಂಭವಾಗಲಿದೆ.
ಗುರುವಾರ ಬೆಳಗ್ಗೆ ಮೊದಲ ಅವ ಶಿಕ್ಷಕರು ಮಕ್ಕಳೊಂದಿಗೆ ಮಾತುಕತೆ ನಡೆಸಬೇಕು. 6 ತಿಂಗಳಿಂದ ಶಾಲೆಯ ಮುಖವನ್ನೇ ನೋಡದ ಮಕ್ಕಳನ್ನು ವಿಶ್ವಾಸಕ್ಕೆ ಪಡೆಯಬೇಕು. ಅವರ ಮನಸಿನಲ್ಲಿರುವ ಭಾವನೆಯನ್ನು ವ್ಯಕ್ತಪಡಿಸಲು ಅವಕಾಶ ಕೊಡಬೇಕು.
ಕೊರೋನಾ ಬಗ್ಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಮಾಸ್ಕ್ ಧಾರಣೆ, ಸ್ವಚ್ಛತೆ, ಶಾರೀರಿಕ ಅಂತರ ಇತ್ಯಾದಿಗಳ ಅಗತ್ಯತೆಗಳನ್ನು ತಿಳಿಹೇಳಬೇಕು. ಬಹುಚರ್ಚಿತ 2ನೇ ಅಲೆ ಬಗ್ಗೆ ತಿಳಿಯಪಡಿಸಿ. ವಿದ್ಯಾರ್ಥಿಗಳ ಮೂಲಕ ಪೊಷಕರಿಗೂ ತಿಳಿಯುವಂತೆ ಮಾಡಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
ಹಾಜರಾತಿ ಕಡ್ಡಾಯವಲ್ಲ:
ಜ.1ರಿಂದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಲಿದ್ದು, 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮದ ಮೂಲಕ ಪಾಠ ನಡೆಯಲಿದೆ. ಶಾಲೆ ಮತ್ತು ಕಾಲೇಜಿಗೆ ಬರಲೇಬೇಕೆಂಬುದನ್ನು ಕಡ್ಡಾಯ ಮಾಡಿಲ್ಲ. ಪೊಷಕರು ಒಪ್ಪಿಗೆ ಪತ್ರ ನೀಡಿ ಕಳುಹಿಸಿದರೆ ಸರಿ. ಇಲ್ಲದಿದ್ದರೆ, ಮನೆಯಲ್ಲೇ ಕಲಿಕೆಗೆ ಯಾವುದೇ ಆಕ್ಷೇಪವಿಲ್ಲ. ಇನ್ನು ವಿದ್ಯಾಗಮ ಕೂಡ ದೈನಂದಿನ ಚಟುವಟಿಕೆ ಅಲ್ಲ. ಜ.15ರ ನಂತರ ಪರಿಸ್ಥಿತಿ ಅವಲೋಕಿಸಿ, ಪ್ರಥಮ ಪಿಯು ತರಗತಿ ಆರಂಭಿಸುವ ಚಿಂತನೆ ನಡೆಸಲಾಗುತ್ತದೆ.