ಇನ್ನು, ಎರಡೂವರೆ ವರ್ಷ ಅಭಿವೃದ್ಧಿಯದ್ದೇ ಮಂತ್ರ : ಮುಖ್ಯಮಂತ್ರಿ ಯಡಿಯೂರಪ್ಪ ಅಭಯ ಕೃಷಿ ಬಜೆಟ್‍ನತ್ತ ಚಿತ್ತ

ಬೆಂಗಳೂರು: ಈ ಬಾರಿ ರೈತಪರ ಹಾಗೂ ಅಭಿವೃದ್ಧಿಪರವಾದ ಆಯ-ವ್ಯಯ ಮಂಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ ಅಂತ್ಯದ ವೇಳೆಗೆ ಜಂಟಿ ಅವೇಶನ ನಡೆಯಲಿದ್ದು, ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
ಮಾರ್ಚ್ ತಿಂಗಳಲ್ಲಿ ಬಜೆಟ್ ಅವೇಶನ ಕರೆಯಲು ಚಿಂತನೆ ನಡೆಸಿದ್ದು, ಈ ಬಾರಿಯ ಬಜೆಟ್‍ನಲ್ಲಿ ರೈತಪರವಾದ ಮತ್ತು ಅಭಿವೃದ್ಧಿ ಪರವಾದ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಆಶ್ವಾಸನೆ ನೀಡಿದರು.
ಮುಂದಿನ ಎರಡುವರೆ ವರ್ಷಗಳ ಕಾಲ ಇದೇ ಆಡಳಿತ ನಡೆಯಲಿದೆ ಎಂಬ ಅಭಯವನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. ಇನ್ನೇನಿದ್ದರೂ ಅಭಿವೃದ್ಧಿಯೇ ನಮ್ಮ ಮಂತ್ರ. ಉತ್ತಮ ಆಡಳಿತ ನೀಡುವತ್ತ ಗಮನ ಹರಿಸುತ್ತೇವೆ. ಅಭಿವೃದ್ಧಿಯಲ್ಲಿ ಹಿನ್ನಡೆಯಾಗದಂತೆ ಮಂದಡಿ ಇಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರ್ಥಿಕಾಭಿವೃದ್ಧಿಯತ್ತ ಚಿತ್ತ
ಆರಂಭದಲ್ಲಿ ಕೆಲ ತಾಲೂಕುಗಳು ಬರದ ಬಾಧೆಯಿಂದ ಬಳಲಿದ್ದರೆ, ನಂತರದ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳು ಅತಿವೃಷ್ಟಿಯಿಂದ ಪ್ರವಾಹಕ್ಕೀಡಾದವು. ಈ ಸವಾಲುಗಳಿಂದ ಹೊರಬರುವ ಮೊದಲೇ ಕೊರೋನಾ ಅಲೆ ಅಪ್ಪಳಿಸಿದ್ದರಿಂದ ಸಾಕಷ್ಟು ಆರ್ಥಿಕ ನಷ್ಟ ಸಂಭವಿಸಿದೆ. ಅನ್‍ಲಾಕ್ ಪ್ರಕ್ರಿಯೆ ನಂತರ ಆರ್ಥಿಕ ಚಟುವಟಿಕೆ ಗರಿಗೆದರಿದೆಯಾದರೂ ನಿರೀಕ್ಷಿತ ಮಟ್ಟದ ಆದಾಯ ಹರಿದು ಬಂದಿಲ್ಲ. ಇನ್ನೊಂದೆಡೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಅನುದಾನ, ವಿಶೇಷ ನಿ, ಪರಿಹಾರ ಧನಗಳೂ ಕಡಿತಗೊಂಡಿದ್ದರಿಂದ ಆರ್ಥಿಕತೆ ಕುಸಿದಿದೆ. ಇದನ್ನು ಸಿಎಂ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದು, ಎಲ್ಲ ಸವಾಲುಗಳ ನಡುವೆಯೂ ಆರ್ಥಿಕಾಭಿವೃದ್ಧಿಯತ್ತ ಚಿತ್ತ ಹರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ