ಕಲ್ಯಾಣ ಚಾಲುಕ್ಯರ ಕಾಲದ ತಾಮ್ರ ಶಾಸನ ಪತ್ತೆ

ಅಂಕೋಲಾ: ಕುಂಬಾರಕೇರಿಯಲ್ಲಿರುವ ಪುರಾತನ ಕದಂಬೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಎರಡು ತಾಮ್ರ ಶಾಸನಗಳು ಪತ್ತೆಯಾಗಿವೆ.
ದೇವಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಮಣ್ಣು ಎತ್ತುವಾಗ ದೊರಕಿದ ಶಾಸನಗಳನ್ನು ಸಮಿತಿಯ ಅಧ್ಯಕ್ಷ ವಿಠ್ಠಲರಾವ್ ವೆರ್ಣೇಕರ್ ಅವರು ಸ್ವಚ್ಛಗೊಳಿಸಿ ಶಾಸನಗಳ ಕುರಿತು ಅಧ್ಯಯನ ನಡೆಸುತ್ತಿರುವ ಶ್ಯಾಮಸುಂದರ ಗೌಡ ಅವರ ಗಮನಕ್ಕೆ ತಂದಾಗ ಇವುಗಳು ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಾಗಿದ್ದು, ಕ್ರಿಸ್ತ ಶಕೆ 975ರಲ್ಲಿ ಬರೆಯಲ್ಪಟ್ಟಿದ್ದು, ಇಂದಿಗೆ 1046 ವರ್ಷಗಳ ಹಿಂದಿನದ್ದು ಎಂದು ತಿಳಿದುಬಂದಿದೆ.
ದೊರಕಿದ ಶಾಸನಗಳಲ್ಲಿ ಒಂದರಲ್ಲಿ ಕಲ್ಯಾಣ ಚಾಲುಕ್ಯರ ಎರಡನೇ ತೈಲಪರ ಕುರಿತು ಉಲ್ಲೇಖವಿದ್ದು, ಶಾಲಿವಾಹನ ಶಖೆ 897, ಭಾದ್ರಪದ ಮಾಸ, ಆದಿತ್ಯವಾರ, ಅಮವಾಶೆ ಎಂದು ಬರೆಯಲಾಗಿದೆ. ಇದರ ಮುಂದುವರಿದ ಭಾಗದ ತಾಮ್ರ ಶಾಸನ ಬೇರೆ ತಾಮ್ರಪತ್ರದಲ್ಲಿ ಬರೆದಿದ್ದು ಅದು ಪತ್ತೆಯಾಗಬೇಕಿದೆ.
ಇಲ್ಲಿ ದೊರೆತ ಇನ್ನೊಂದು ತಾಮ್ರ ಶಾಸನ ಭಿನ್ನವಾಗಿದ್ದು ಅದರಲ್ಲಿ ಬರೆದಿರುವುದು ಸ್ಪಷ್ಟವಾಗಿ ಕಾಣುತ್ತಿಲ್ಲ. ಆದ್ದರಿಂದ ಅದನ್ನು ಸ್ವಚ್ಛಗೊಳಿಸಿ ಓದುವುದಾಗಿ ಶ್ಯಾಮಸುಂದರ ಗೌಡ ಹೇಳಿದ್ದಾರೆ.
ಕದಂಬೇಶ್ವರಕ್ಕೆ ಚಾಲುಕ್ಯರ ಕೊಡುಗೆ
ಕ್ರಿಸ್ತ ಶಕೆ 973 ರಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆ ಆರಂಭವಾಗಿದ್ದು, 1190ರ ವರೆಗೆ ಮುಂದುವರಿದಿದೆ ಇದರ ಸಂಸ್ಥಾಪಕ ದೊರೆ ಎರಡನೇ ತೈಲಪ ಕ್ರಿ.ಶ 997ರವರೆಗೆ ಆಳ್ವಿಕೆ ನಡೆಸಿದ ಎಂದು ಇತಿಹಾಸದ ಅಧ್ಯಯನದಿಂದ ತಿಳಿದು ಬರುತ್ತಿದೆ .

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ