ಹೊಸದಿಲ್ಲಿ: ಪ್ರತಿಯೊಂದು ವಲಯದಲ್ಲಿಯೂ ಆತ್ಮನಿರ್ಭರತೆ ಸಾಸಲು ಕೇಂದ್ರ ಸರ್ಕಾರ ಒತ್ತು ನೀಡಿರುವ ಹಿನ್ನೆಲೆ ಇನ್ನು ಮುಂದೆ ಸಶಸ್ತ್ರ ಪಡೆಗಳಿಗೆ ದೇಶದಲ್ಲಿಯೇ ತಯಾರಿಸಲಾಗಿರುವ ಮಷೀನ್ ಪಿಸ್ತೂಲ್, ಬುಲೆಟ್ಪ್ರೂಫ್ ಜಾಕೆಟ್ ಹಾಗೂ ವಿಚಕ್ಷಣಾ ಸಾಧನಗಳಂತಹ ಪ್ರಮುಖ ರಕ್ಷಣಾ ಸಾಮಗ್ರಿಗಳು ಸೇರ್ಪಡೆಗೊಳ್ಳಲಿದ್ದು, ಮತ್ತಷ್ಟು ಬಲ ನೀಡಲಿವೆ.
ಬುಧವಾರವಷ್ಟೇ ಕೇಂದ್ರ ಸಚಿವ ಸಂಪುಟವು ಭಾರತೀಯ ವಾಯು ಪಡೆಗೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್)ನಿಂದ ನಿರ್ಮಿತವಾಗಿರುವ 83 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು 48,000 ಕೋಟಿ ರೂ.ಗಳ ಒಪ್ಪಂದಕ್ಕಾಗಿ ಒಪ್ಪಿಗೆ ಸೂಚಿಸಿದೆ. ಇದರ ಬೆನ್ನಲ್ಲಿಯೇ ಸೇನೆಯ ನಾವೀನ್ಯ ಕಾರ್ಯಕ್ರಮದಲ್ಲಿ ದೇಶೀಯವಾಗಿಯೇ ಅಭಿವೃದ್ಧಿ ಪಡಿಸಲಾಗಿರುವ ಶಕ್ತಿ ಬುಲೆಟ್ಪ್ರೂಫ್ ಜಾಕೆಟ್, 99 ಎಂಎಂ ಮಷೀನ್ ಪಿಸ್ತೂಲ್ ಮತ್ತು ವಿಚಕ್ಷಣಾ ಮೈಕ್ರೋಕಾಪ್ಟರ್ಗಳಂತಹ ರಕ್ಷಣಾ ಸಾಮಗ್ರಿಗಳನ್ನು ಸಶಸ್ತ್ರ ಪಡೆಗಳಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಶಕ್ತಿ ಬುಲೆಟ್ಪ್ರೂಫ್ ಜಾಕೆಟ್
ಮೇಜರ್ ಅನೂಪ್ ಮಿಶ್ರಾ ಅವರು ಶಕ್ತಿ ಹೆಸರಿನಲ್ಲಿ ಬುಲೆಟ್ಪ್ರೂಫ್ ಜಾಕೆಟ್ ಅನ್ನು ಅಭಿವೃದ್ಧಿ ಪಡಿಸಿದ್ದು, ಇದು ಕೇವಲ 6.7 ಕೆ.ಜಿ. ತೂಕವಿರುವ ಜಾಕೆಟ್ ಆಗಿದ್ದು, ಜಗತ್ತಿನ ಅತ್ಯಂತ ಹಗುರ ರಕ್ಷಾ ಕವಚವಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ನೆರೆ ರಾಷ್ಟ್ರಗಳು ಮತ್ತು ಭಯೋತ್ಪಾದಕರು ನಡೆಸುವ ದಾಳಿಯಿಂದ ಭಾರತೀಯ ಸೇನೆಯ ಸೈನಿಕರನ್ನು ರಕ್ಷಿಸಲು ಸಹಾಯಕವಾಗಲಿದೆ ಎಂದು ಸೇನಾ ಅಕಾರಿ ತಿಳಿಸಿದ್ದಾರೆ.
ಮಷೀನ್ ಪಿಸ್ತೂಲ್
ಸ್ಥಳೀಯವಾಗಿ ಅಭಿವೃದ್ಧಿಗೊಂಡಿರುವ ದೇಶದ ಮೊದಲ ಮಷೀನ್ ಪಿಸ್ತೂಲ್ ಎಎಸ್ಎಂಐ ಸಹ ರಕ್ಷಣಾ ಪಡೆಗಳಿಗೆ ಸೇರ್ಪಡೆಗೊಂಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯಿಂದ ಅಭಿವೃದ್ಧಿಗೊಂಡಿರುವ ಮಷೀನ್ ಪಿಸ್ತೂಲ್ ಪ್ರಸ್ತುತ ಸಶಸ್ತ್ರ ಪಡೆಗಳಿಂದ ಬಳಸಲಾಗುತ್ತಿರುವ 9ಎಂಎಂ ಪಿಸ್ತೂಲ್ಗೆ ಪರ್ಯಾಯವಾಗಿರಲಿದೆ. 100 ಮೀಟರ್ ವ್ಯಾಪ್ತಿಯ ಗುರಿಯನ್ನು ಹೊಡೆದುರುಳಿಸಲು ಸಾಮಥ್ರ್ಯವನ್ನು ಪಿಸ್ತೂಲ್ ಹೊಂದಿದೆ. 2 ಕೆಜಿ ತೂಕವುಳ್ಳ ಪಿಸ್ತೂಲ್, ವಾಯುಪಡೆ ಸಿಬ್ಬಂದಿ, ಚಾಲಕರು, ರಡಾರ್ ಆಪರೇಟರ್ಗಳು, ಪೊಲೀಸ್ ಸಿಬ್ಬಂದಿ, ಕಮಾಂಡರ್ಗಳು ಮತ್ತು ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ಅತ್ಯುತ್ತಮವಾಗಿ ಉಪಯೋಗಕ್ಕೆ ಬರಲಿದೆ ಎಂದು ಡಿಆರ್ಡಿಒ ಹೇಳಿಕೆಯಲ್ಲಿ ತಿಳಿಸಿದೆ.
ಮೈಕ್ರೋಕಾಪ್ಟರ್
ಕಟ್ಟಡದೊಳಗೆ ಇಲ್ಲವೆ ಕೋಣೆಯಲ್ಲಿ ಅಡಗಿರುವ ಶತ್ರುಗಳು ಅಥವಾ ಭಯೋತ್ಪಾದಕರನ್ನು ಪತ್ತೆಹಚ್ಚಲು ಲೆಫ್ಟಿನಂಟ್ ಕರ್ನಲ್ ಜಿ.ವೈ.ಕೆ . ರೆಡ್ಡಿ ಅವರು ಮೈಕ್ರೋಕಾಪ್ಟರ್ನ್ನು ಅಭಿವೃದ್ಧಿಗೊಳಿಸಿದ್ದಾರೆ. ಈ ಸಾಮಗ್ರಿ ಜಮ್ಮುಮತ್ತು ಕಾಶ್ಮೀರದ ವಿಶೇಷ ಅರೆ ಸೇನಾ ಪಡೆಗಳ ಬೆಟಾಲಿಯನ್ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು, ಅಗತ್ಯವಿದ್ದ ಹೆಚ್ಚಿನ ಸುಧಾರಣೆಗಳನ್ನು ಮಾಡಲಾಗಿದೆ. ಸ್ವಿಚ್ ಡ್ರೋನ್ 4,000 ಮೀಟರ್ ಎತ್ತರದಲ್ಲಿ 2 ಗಂಟೆಗಳ ಕಾಲ ಹಾರಾಟ ನಡೆಸುವ ಸಾಮಥ್ರ್ಯವುಳ್ಳದ್ದಾಗಿದೆ.
ವಿಚಕ್ಷಣ ಸಾಧನ
ಗಡಿ ನಿಯಂತ್ರಣಾ ರೇಖೆಯಲ್ಲಿ ಯಾವುದೇ ಬಗೆಯ ಕಂಪನ ಅಥವಾ ಚಲನೆಯನ್ನು ಗ್ರಹಿಸುವ ಸಾಮಥ್ರ್ಯವುಳ್ಳ ವಿಚಕ್ಷಣ ಸಾಧನವನ್ನು ವಿಹಾನ್ ನೆಟ್ವರ್ಕ್ ಲಿಮಿಟೆಡ್ ಅಭಿವೃದ್ಧಿ ಪಡಿಸಿದ್ದು, ಇದು 25 ಅಡಿಗಳವರೆಗೆ ಸುರಂಗದೊಳಗಿನ ಚಟುವಟಿಕೆಯನ್ನು ಪತ್ತೆಹಚ್ಚುವ ಸಾಮಥ್ರ್ಯವನ್ನು ಹೊಂದಿದೆ.
ಸ್ನಾಪ್ ಕ್ಯಾಮೆರಾವನ್ನು ಒಳಗೊಂಡಿರುವ ಈ ವಿಚಕ್ಷಣ ಸಾಧನವು ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಎಚ್ಚರಿಕೆ ನೀಡಲು ಸಹಾಯಕವಾಗಲಿದೆ.