ಶಬರಿಮಲೆ: ಮಕರಜ್ಯೋತಿ ದರ್ಶನ ಪಡೆದ ಭಕ್ತಸ್ತೋಮ

ಕಾಸರಗೋಡು: ಹಿಂದುಗಳ ಪವಿತ್ರ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಸಂಕ್ರಮಣ ಶುಭದಿನವಾದ ಗುರುವಾರ ಸಂಜೆ ಪುಣ್ಯ ಘಳಿಗೆಯಲ್ಲಿ ಮಕರಜ್ಯೋತಿ ದರ್ಶನವಾಯಿತು. ಮಕರ ಜ್ಯೋತಿದರ್ಶನದಿಂದ ಭಕ್ತಸ್ತೋಮ ಪುನೀತವಾಯಿತು.
ತಿರುವಾಭರಣ (ತಂಗಅಂಗಿ) ವನ್ನೊಳಗೊಂಡ ಶೋಭಯಾತ್ರೆಯು ಸಂಜೆ ಸನ್ನಿಧಾನಕ್ಕೆ ತಲುಪಿ ಹದಿನೆಂಟು ಮೆಟ್ಟಲೇರಿ ತಂದ ತಿರುವಾಭರಣವನ್ನು ತಂತ್ರಿವರ್ಯರಾದ ಕಂಠರಾರ್ ರಾಜೀವರ್ ಹಾಗೂ ಮುಖ್ಯ ಅರ್ಚಕ (ಮೇಲ್ಶಾಂತಿ)ವಿ.ಕೆ.ಜಯರಾಜ್ ಪೊಟ್ಟಿಯವರು ಪಡೆದುಕೊಂಡರು. ಬಳಿಕ ಗರ್ಭಗುಡಿಯೊಳಗೆ ಶ್ರೀ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ನೆರವೇರಿಸಿದರು. ಈ ವೇಳೆ ಅಕಾಶದಲ್ಲಿ ಕೃಷ್ಣ ಪಕ್ಷಿ (ಗರುಡ) ಸುತ್ತುತ್ತಿತ್ತು. ಅಲ್ಲದೆ ಪೊನ್ನಂಬಲ ಮೇಡು(ಬೆಟ್ಟ)ವಿನಲ್ಲಿ ಮೂರು ಬಾರಿ ಪವಿತ್ರ ಮಕರಜ್ಯೋತಿಯ ದರ್ಶನವಾಯಿತು.
ಮಕರ ಜ್ಯೋತಿ ದಿನದಂದು ನಡೆಯುವ ವಿಶೇಷವಾದ ಸಂಕ್ರಮಣ ಪೂಜೆ ಗುರುವಾರ ಬೆಳಗ್ಗೆ ವಿವಿಧ ವಿ ವಿಧಾನಗಳೊಂದಿಗೆ ಜರಗಿತು. ತಿರುವಿದಾಂಕೂರು ಅರಮನೆಯಿಂದ ತರಲಾದ ತುಪ್ಪವನ್ನು ಬಳಸಿ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಅಭಿಷೇಕದೊಂದಿಗೆ ಸಂಕ್ರಮಣ ಪೂಜೆ ನಡೆಸಲಾಯಿತು. ಕೋವಿಡ್ ಮಾನದಂಡಗಳೊಂದಿಗೆ ಈ ಬಾರಿ ಮಕರ ಜ್ಯೋತಿ ಉತ್ಸವ ಜರಗಿತು.
ಮುಂಗಡವಾಗಿ ಹೆಸರು ನೋಂದಾಯಿಸಿದ ಐದು ಸಾವಿರ ಮಂದಿಗೆ ಮಾತ್ರವೇ ಗುರುವಾರ ಸನ್ನಿಧಾನಕ್ಕೆ ಪ್ರವೇಶಿಸಿಸಲು ಅನುಮತಿ ನೀಡಲಾಗಿತ್ತು. ಜ. 20ರಂದು ಬೆಳಗ್ಗೆ ಶಬರಿಮಲೆ ಕ್ಷೇತ್ರದ ನಡೆ ಮುಚ್ಚುವುದರೊಂದಿಗೆ ಈ ವರ್ಷದ ಶಬರಿಮಲೆ ತೀರ್ಥಯಾತ್ರಾ ಋತು ಸಂಪನ್ನಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ