ಅಯೋಧ್ಯೆ: 70 ಎಕರೆ ಪ್ರದೇಶದಲ್ಲಿನ ನಿರ್ಮಾಣ, ಅಭಿವೃದ್ಧಿ ಕುರಿತ ಮಾಸ್ಟರ್ ಪ್ಲ್ಯಾನ್ ಬಿಡುಗಡೆ ಮಂದಿರ ನಿರ್ಮಾಣದ ಬೃಹದ್ಯೋಜನೆ

ಉಡುಪಿ: ಧರ್ಮ ನಗರಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಈ ಮಧ್ಯೆ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಅೀನ 70 ಎಕರೆ ಪ್ರದೇಶದಲ್ಲಿನ ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಮಾಸ್ಟರ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಪ್ರಧಾನ ದೇವಾಲಯದ ಹೊರತಾಗಿ ಅಲ್ಲಿ ತೀರ್ಥಕ್ಷೇತ್ರಗಳು ಹಾಗೂ ಪಾರಂಪರಿಕ ಅಭ್ಯುದಯವೂ ಆಗಲಿದೆ.
2 ಹಂತದಲ್ಲಿ ಅಭಿವೃದ್ಧಿ
ಎರಡು ಹಂತಗಳಲ್ಲಿ ಶ್ರೀರಾಮ ಜನ್ಮಭೂಮಿಯ ಅಭಿವೃದ್ಧಿಯಾಗಲಿದೆ. ರಾಮ ಮಂದಿರ, ದೇವಾಲಯ ಪರಿಸರ ಮತ್ತು ತೀರ್ಥಕ್ಷೇತ್ರ ಪರಿಸರದ ಅಭಿವೃದ್ಧಿ ಒಂದೆಡೆಯಾದರೆ, ಪಾರಂಪರಿಕ ಪ್ರಚಾರದಡಿಯಲ್ಲಿ ಅಯೋಧ್ಯಾ ತೀರ್ಥಯಾತ್ರೆಯ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಯನ್ನೂ ಈ ಪ್ರಸ್ತಾವಿತ ಮಾಸ್ಟರ್ ಪ್ಲ್ಯಾನ್ ಒಳಗೊಂಡಿದೆ.
ನೈಸರ್ಗಿಕ ವಸ್ತುಗಳಿಂದ ಮಂದಿರ ನಿರ್ಮಾಣ!
ಜನ್ಮಭೂಮಿಯ 2.7 ಎಕರೆ ಪ್ರದೇಶದಲ್ಲಿ ರಾಮ ಮಂದಿರದ ಒಟ್ಟು ನಿರ್ಮಿತ ಪ್ರದೇಶದ ವಿಸ್ತೀರ್ಣವು 57,400 ಚದರಡಿಗಳಾಗಿವೆ. ಒಟ್ಟು 360 ಅಡಿ ಉದ್ದ, 235 ಅಡಿ ಅಗಲ ಮತ್ತು 161 ಅಡಿ ಎತ್ತರ ಹೊಂದಿರಲಿದೆ. ಐದು ಶಿಖರಗಳು ಹಾಗೂ ಮೂರು ಮಹಡಿಗಳಿರುವ ಮಂದಿರಕ್ಕೆ 12 ದ್ವಾರಗಳಿರುತ್ತವೆ. ಮಂದಿರದ ನೆಲ ಮಹಡಿಯಲ್ಲಿ 160 ಸ್ತಂಭಗಳು, ಮೊದಲ ಮಹಡಿಯಲ್ಲಿ 132 ಮತ್ತು ಎರಡನೇ ಮಹಡಿಯಲ್ಲಿ 74 ಸ್ತಂಭಗಳಿರಲಿವೆ. ರಾಮ ಮಂದಿರ ನಿರ್ಮಾಣದಲ್ಲಿ ನೈಸರ್ಗಿಕ ವಸ್ತುಗಳ ಗರಿಷ್ಠ ಬಳಕೆ ಮಾಡಲಾಗುತ್ತದೆ. ಮಾತ್ರವಲ್ಲ, ಪರಿಸರ ಮಾನದಂಡಗಳ ಪ್ರಕಾರ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ.
ರಾಮಭಕ್ತ ಹನುಮಂತನ ಬೃಹತ್ ವಿಗ್ರಹ
ಪ್ರಸ್ತಾವಿತ ಮಾಸ್ಟರ್ ಪ್ಲ್ಯಾನ್‍ನಲ್ಲಿ 70 ಎಕರೆ ಪ್ರದೇಶದಲ್ಲಿ ರಾಮ ಜನ್ಮಭೂಮಿ ಸಂಕೀರ್ಣದ ಭವ್ಯತೆ ಇರಲಿದೆ. ಶ್ರೀರಾಮ ಕುಂಡ್ (ಯಜ್ಞ ಶಾಲಾ), ಕರ್ಮ ಕ್ಷೇತ್ರ (ಅನುಷ್ಠಾನ ಮಂಟಪ) ಹನುಮಾನ್ ಗಡಿ (ವೀರ ಮಾರುತಿಯ ಬೃಹತ್ ವಿಗ್ರಹ), ಶ್ರೀರಾಮಲಲ್ಲಾ ಪೂರ್ಣಕಾಲಿಕ ದರ್ಶನ ಮಂಡಲ್ (ಉತ್ಖನನದಲ್ಲಿ ಸಿಕ್ಕಿದ ಶಾಸನಗಳು ಮತ್ತು ಪ್ರಾಚೀನ ವಸ್ತುಗಳ ಜನ್ಮಭೂಮಿ ವಸ್ತುಸಂಗ್ರಹಾಲಯ ಪ್ರದರ್ಶನ), ಶ್ರೀರಾಮ್ ಕೀರ್ತಿ (ಸತ್ಸಂಗ ಭವನ), ಗುರು ವಶಿಷ್ಠ ಪೀಠಿಕಾ (ವೇದ, ಪುರಾಣ, ರಾಮಾಯಣ ಮತ್ತು ಸಂಸ್ಕøತ ಅಧ್ಯಯನ ಸಂಶೋಧನಾ ಕೇಂದ್ರ), ಭಕ್ತಿತಿಲಾ (ಶಾಂತಿ ಕ್ಷೇತ್ರ ಧ್ಯಾನ ಮತ್ತು ಏಕಾಗ್ರತಾ ನಿಕುಂಜ್), ತುಳಸಿ (ರಾಮಲೀಲಾ ಕೇಂದ್ರ, 360 ಡಿಗ್ರಿ ಥಿಯೇಟರ್/ಮುಕ್ತಕಶೀ ಮಂಚ್), ರಾಮ್ ದರ್ಬಾರ್ (ಪೆÇ್ರಜೆಕ್ಷನ್ ಥಿಯೇಟರ್) ಒಳಗೊಂಡಿದೆ.
ಸೀತಾ ಮಾತೆಯ ಹೆಸರಿನಲ್ಲಿ ಭೋಜನಶಾಲೆ
ಇದಲ್ಲದೇ ಮಾತಾ ಕೌಸಲ್ಯಾ ವಾತ್ಸಲ್ಯ ಮಂಟಪ್ (ಪ್ರದರ್ಶನ ಮಂಟಪ ಮತ್ತು ಪ್ರದಕ್ಷಿಣಾ ಪರಿಸರ), ರಾಮಾಂಗಣ್ (ಬಹುಆಯಾಮದ ಚಿತ್ರಮಂದಿರಗಳು), ರಾಮಾಯಣ (ಗ್ರಂಥಾಲಯ ಮತ್ತು ವಾಚನಾಲಯ), ಮಹರ್ಷಿ ವಾಲ್ಮಿಕಿ (ದಾಖಲೆಗಳು ಮತ್ತು ಸಂಶೋಧನಾ ಕೇಂದ್ರ), ರಾಮಾಶ್ರಯಂ (ಧರ್ಮಶಾಲಾ, ನಿರೀಕ್ಷಣಾಲಯ ಮತ್ತು ವಿಶ್ರಾಂತಿ ಕೊಠಡಿಗಳು), ಲಕ್ಷ್ಮಣ ವಾಟಿಕಾ (ಜಲಾಶಯ ಮತ್ತು ಸಂಗೀತ ಕಾರಂಜಿಗಳು), ಲವಕುಶ ನಿಕುಂಜ್ (ಯುವ ಮತ್ತು ಮಕ್ಕಳ ಚಟುವಟಿಕೆಗಳ ಪ್ರದೇಶ),
ಮರ್ಯಾದಾ ಖಂಡ (ವಿಶೇಷ ಅತಿಥಿ ಗೃಹಗಳು), ಭರತ ಪ್ರಸಾದ ಮಂಟಪ (ಪ್ರಸಾದ ಪಾಕಶಾಲೆ, ಉಗ್ರಾಣ,
ವಿತರಣಾ ಕೊಠಡಿ), ಮಾತಾ ಸೀತಾ ರಸೋಯಿ ಅನ್ನಕ್ಷೇತ್ರ (ಧಾನ್ಯ ಸಂಗ್ರಹಣೆ, ಅಡುಗೆಮನೆ, ವಿತರಣೆ, ಭೋಜನಶಾಲೆ ಮತ್ತು ಕೈ ತೊಳೆಯುವ ಸ್ಥಳ) ಇತ್ಯಾದಿ ರಾಮಾಯಣದಲ್ಲಿ ಬರುವ ಪಾತ್ರಗಳ ಹೆಸರಿನಲ್ಲಿ ಯೋಜನೆ ಸಿದ್ಧಗೊಂಡಿದೆ.
ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಎರಡು ದಿನಗಳ ಹಿಂದೆ ರಾಮಜನ್ಮಭೂಮಿಯ ಸಂಪೂರ್ಣ ಅಭಿವೃದ್ಧಿಯ ಸ್ವರೂಪವನ್ನು ಬಿಡುಗಡೆ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ