ರಾಜಕೀಯ ಆರೋಪ ಮಾಡುವುದನ್ನು ನಿಲ್ಲಿಸಬೇಕು: ಶೆಟ್ಟರ್

ಉಡುಪಿ: ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಮುಖಂಡನ ರಕ್ಷಣೆಗಾಗಿ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ರಾಜಕೀಯ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಕೈಗಾರಿಕಾ ಖಾತೆ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಉಡುಪಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರಕಾರ ಇದ್ದಾಗ ಆಂಧ್ರಪ್ರದೇಶದಲ್ಲಿ ಜಗನ್ಮೋಹನ ರೆಡ್ಡಿ ಅವರನ್ನು ಬಂಸಿಲ್ಲವೇ? ಅವರನ್ನು ವರ್ಷಗಟ್ಟಲೆ ಜೈಲಿಗೆ ಹಾಕಿಲ್ಲವೇ? ಕರ್ನಾಟಕದಲ್ಲಿ ಜನಾರ್ದನ ರೆಡ್ಡಿ ಅವರನ್ನು ಜೈಲಿಗೆ ಹಾಕಿದಾಗ ನಾವೇನಾದರೂ ಮಾತಾಡಿದ್ದೇವೆಯೇ? ನಾವೇನೂ ರಾಜಕೀಯ ಪ್ರೇರಿತ ಅನ್ನುವ ಆರೋಪ ಮಾಡಿರಲಿಲ್ಲ, ಸಿಬಿಐ ಒಂದು ಸ್ವತಂತ್ರ ಸಂಸ್ಥೆ. ಅದಕ್ಕೆ ತನಿಖೆ ಮಾಡಲು ಬಿಡಿ ಎಂದರು.
ತಪ್ಪಿಲ್ಲದಿದ್ದರೆ ಭಯವೇಕೆ ಪಡುತ್ತೀರಿ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ಅವರೀಗ ಜಾಮೀನಿನ ಮೇಲೆ ಹೊರಗಿದ್ದಾರೆ. ಅಷ್ಟೇ ಅಲ್ಲ ಡಿ.ಕೆ.ಶಿ. ಅವರ ಪ್ರಕರಣ ಇನ್ನೂ ಖುಲ್ಲಾ (ಖುಲಾಸೆ) ಆಗಿಲ್ಲ ಎಂದು ಹೇಳಿದ ಶೆಟ್ಟರ್, ರಾಜಕಾರಣಕ್ಕೆ ಬಂದಾಗ ನಿಮ್ಮ ಆಸ್ತಿ ಎಷ್ಟಿತ್ತು ಡಿ.ಕೆ. ಶಿವಕುಮಾರ್ ಅವರೇ? ಈಗ ನಿಮ್ಮ ಆಸ್ತಿ ಎಷ್ಟಿದೆ?
ಹೆಚ್ಚಾದ ನಿಮ್ಮ ಆಸ್ತಿ ವಿವರ ಸಿಬಿಐ ಕೇಳುತ್ತದೆ, ಸರಿಯಾದ ಮಾರ್ಗದಲ್ಲಿ ಆಸ್ತಿ ಗಳಿಸಿದ್ದರೆ ಭಯ ಯಾಕೆ? ಎಂದು ಪ್ರಶ್ನಿಸಿದರು. ಏನೂ ತಪ್ಪಿಲ್ಲ ಅಂದರೆ ನಿಮ್ಮ ಭಯಕ್ಕೆ ಏನು ಕಾರಣ? ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡಬೇಡಿ ಎಂದು ಸಲಹೆ ನೀಡಿದರು.
ಡಿ.ಕೆ. ಶಿವಕುಮಾರ್ ದಿಲ್ಲಿ ಪ್ರವಾಸದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿ. ನಡುವೆ ಹಿಂದಿನಿಂದಲೂ ಭಿನ್ನಾಭಿಪ್ರಾಯವಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಬಯಸಿದ್ದಾರೆ, ಮಾತ್ರವಲ್ಲ ಬಹಿರಂಗವಾಗಿ ಸಿಎಂ ಆಗುವ ಹೇಳಿಕೆಗಳನ್ನೂ ಕೊಡುತ್ತಿದ್ದಾರೆ. ಈ ನಡುವೆ ಡಿ.ಕೆ.ಶಿ. ಮುಖ್ಯಮಂತ್ರಿಯಾಗಬೇಕೆಂದು ಕೆಲ ಶಾಸಕರು ಹೇಳುತ್ತಿದ್ದಾರೆ. ಹಾಗಾಗಿ ಅವರಿಬ್ಬರೂ ಒಳಗಿಂದೊಳಗೆ ಕತ್ತಿ ಮಸೆಯುತ್ತಿದ್ದಾರೆ, ಒಬ್ಬರ ಮೇಲೆ ಇನ್ನೊಬ್ಬರು ಯಾವಾಗ ಹೊಡೆಯುತ್ತಾರೆ ಎಂಬುದು ಇನ್ನು ಬಹಿರಂಗವಾಗಬೇಕಷ್ಟೇ ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನದ ಹಿನ್ನೆಲೆಯಲ್ಲಿ ಲಿಂಗಾಯತ ಸ್ವಾಮೀಜಿಗಳು ಕುಲಕರ್ಣಿ ಮನೆಗೆ ಭೇಟಿ ನೀಡಿರುವ ಬಗ್ಗೆ ತಾನು ಪ್ರತಿಕ್ರಿಯಿಸುವುದಿಲ್ಲ. ತಾನು ರಾಜಕೀಯವಾಗಿ ಮಾತ್ರ ಉತ್ತರ ಕೊಡುತ್ತಿದ್ದೇನೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ