ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡಿ ಶ್ರೀ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಸಲಹೆ

ಪುತ್ತಿಗೆ (ಉಡುಪಿ):ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವಶಂಕರ ವಿಮಾನನಿಲ್ದಾಣವೆಂದು ನಾಮಕರಣ ಮಾಡುವುದು ಅತ್ಯಂತ ಅರ್ಥಪೂರ್ಣ, ಅಪೂರ್ವ ಮತ್ತು ಮೌಲಿಕವೆನಿಸುವ ಕ್ರಮವಾಗಬಹುದೆಂಬುದಾಗಿ ಪುತ್ತಿಗೆ ಮಠಾೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಲಹೆ ನೀಡಿದ್ದಾರೆ.
ಇಡಿ ವಿಶ್ವವು ಭಾರತವನ್ನು ಆಧ್ಯಾತ್ಮಿಕ ದೃಷ್ಟಿಯಿಂದಲೇ ಗುರುತಿಸುತ್ತಿದೆ. ದೇಶದ ರಾಜಕೀಯ ನೇತಾರರು ಕೂಡಾ ಭಾರತವನ್ನು `ವಿಶ್ವಗುರು’ವನ್ನಾಗಿಸಬೇಕೆಂಬುದಾಗಿ ಪ್ರತಿಪಾದಿಸುತ್ತಿದ್ದಾರೆ. ಈ ದೃಷ್ಟಿಯಲ್ಲಿ ಭಾರತೀಯ ಮೇರು ದಾರ್ಶನಿಕರಾಗಿ ಈಗಾಗಲೇ ವಿಶ್ವಗುರು ಎಂದೆನಿಸಿರುವ ಹಾಗೂ ಮಂಗಳೂರು ಸಮೀಪದ ಉಡುಪಿ, ಶೃಂಗೇರಿಯಲ್ಲಿ ತಮ್ಮ ಕೇಂದ್ರಗಳನ್ನು ಸ್ಥಾಪಿಸಿ ಶತಶತಮಾನಗಳಿಂದ ತಮ್ಮ ಆಧ್ಯಾತ್ಮಿಕ ಸಂದೇಶ ನೀಡುತ್ತಿರುವ ಜಗದ್ಗುರು ಶ್ರೀ ಮಧ್ವಾಚಾರ್ಯ, ಜಗದ್ಗುರು ಶ್ರೀ ಶಂಕರಾಚಾರ್ಯರ ಹೆಸರಿನಲ್ಲಿ ಪರಶುರಾಮ ಕ್ಷೇತ್ರದಲ್ಲಿರುವ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವಶಂಕರ ವಿಮಾನನಿಲ್ದಾಣವೆಂದು ಹೆಸರಿಡುವುದು ಅರ್ಥಪೂರ್ಣವಾಗಬಹುದು ಎಂಬುದಾಗಿ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಮಾನನಿಲ್ದಾಣ ಮೂಡಿಬಂದಂತೆ, ದಾರ್ಶನಿಕ ಆಚಾರ್ಯರುಗಳ ನೆಲೆವೀಡಾದ ದಕ್ಷಿಣಭಾರತದ ವಿಮಾನನಿಲ್ದಾಣಕ್ಕೆ ಶ್ರೀ ಮಧ್ವಶಂಕರರ ನಾಮಕರಣ ಭಾರತೀಯ ದಾರ್ಶನಿಕ ಪರಂಪರೆಗೆ ಗೌರವ ಸಲ್ಲಿಸಿದಂತಾಗುವುದು.ಮಾತ್ರವಲ್ಲದೆ ಜಗತ್ತಿನಲ್ಲಿ ಧರ್ಮಪ್ರಚಾರ ಮತ್ತು ಭಾವೈಕ್ಯಕ್ಕೂ ಇಂಬು ನೀಡುತ್ತದೆ ಎಂಬುದಾಗಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುಪೇಂದ್ರತೀರ್ಥ ಪೀಠದ ಪೀಠಾೀಶರಾದ ಶ್ರೀಗಳು ಸಂಬಂಧಪಟ್ಟವರ ಗಮನ ಸೆಳೆದಿದ್ದಾರೆ.
ಆಧ್ಯಾತ್ಮಿಕತೆಯೇ ಭಾರತದ ಮೂಲ ಮತ್ತು ಅಪೂರ್ವ ಸಂಪತ್ತು. ಧಾರ್ಮಿಕ -ಆಧ್ಯಾತ್ಮಿಕ ಕ್ಷೇತ್ರದಲ್ಲೇ ಭಾರತಕ್ಕೆ ಮುಂದೆ ಜಗತ್ತಿನ ನೇತೃತ್ವ ಪಡೆಯಲು ಉಜ್ವಲ ಅವಕಾಶವಿರುವುದರಿಂದ ಶ್ರೀ ರಾಮಾನುಜಾಚಾರ್ಯ, ಬಸವಣ್ಣ ಮೊದಲಾದ ಮಹಾ ಧಾರ್ಮಿಕ ನೇತಾರರ ಮೂಲಸ್ಥಳಗಳ ಸಮೀಪದಲ್ಲಿರುವ ದೇಶದ ಉಳಿದ ವಿಮಾನ ನಿಲ್ದಾಣಗಳಿಗೂ ಆಯಾ ಧಾರ್ಮಿಕ ನೇತಾರರ ನಾಮಕರಣ ಮಾಡುವುದೇ ಉಳಿದೆಲ್ಲ ಆಯ್ಕೆಗಳಿಗಿಂತಲೂ ಹೆಚ್ಚು ಪ್ರಶಸ್ತ ಎಂಬುದಾಗಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೊರೋನಾದಂತಹ ಪಿಡುಗುಗಳ ಹಿನ್ನೆಲೆಯಲ್ಲಿ ಚಿಂತಿಸಿದಾಗ ಜಗತ್ತಿಗೆ ಇಂದು ಆಧ್ಯಾತ್ಮಿಕ ಆಂದೋಲನವೊಂದರ ಅಗತ್ಯ ಬಹುವಾಗಿ ಎದ್ದುಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕತೆಗೆ ಸರಕಾರಗಳು ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದಲೂ ಶ್ರೀ ಮಧ್ವಶಂಕರ ಹೆಸರು ಅತ್ಯಂತ ಸೂಕ್ತ ಎಂಬುದಾಗಿ ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ