ಬಿಜೆಪಿ ಕೋರ್ ಕಮಿಟಿ ತೀರ್ಮಾನಕ್ಕೆ ಸಿಎಂ ಬಿಎಸ್‍ವೈ ಒಪ್ಪಿದ್ದಾರೆ: ನಳಿನ್ ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ

ಉಡುಪಿ: ದೇಶದ ಬೇರೆ ಬೇರೆ ಕಡೆಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ವರದಿಯಾಗುತ್ತಿವೆ. ಕರ್ನಾಟಕದಲ್ಲಿ ರಾಜ್ಯ ಸರಕಾರ ಲವ್ ಜಿಹಾದ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು ಹೇಳಿದ್ದಾರೆ.
ಶುಕ್ರವಾರ ಉಡುಪಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮದ ಕುರಿತು ಪಕ್ಷ, ಕೋರ್ ಕಮಿಟಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿಯವರು ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಎಂದರು.
ಸಮಯ ಬಂದಾಗ ಸಚಿವ ಸಂಪುಟ ವಿಸ್ತರಣೆ
ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟಿದೆ. ಅವರು ಕೇಂದ್ರದ ನಾಯಕರ ಜೊತೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಮಯ ಬಂದಾಗ ವಿಸ್ತರಣೆ ಮಾಡುತ್ತಾರೆ ಎಂದ ನಳಿನ್ ಕುಮಾರ್, ಕೇಂದ್ರದಿಂದ ಅನುದಾನ ಮತ್ತು ಯೋಜನೆಗಳನ್ನು ಮಂಜೂರು ಮಾಡಿಸಲು ಸಚಿವರು ದಿಲ್ಲಿಗೆ ಹೋಗುವುದು ಸಹಜ. ಈ ಸಂದರ್ಭಗಳಲ್ಲಿ ಅಲ್ಲಿರುವ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವುದು ಪರಿಪಾಠ ಎಂದು ರಾಜ್ಯದ ಸಚಿವರ ದಿಲ್ಲಿ ಭೇಟಿ ಕುರಿತು ಸಮರ್ಥಿಸಿದರು.
ಕಾಂಗ್ರೆಸ್ ಸಿಬಿಐ ಅನ್ನು ದುರ್ಬಳಕೆ ಮಾಡಿತ್ತಾ?
ಸಿಬಿಐ ಎಲ್ಲರಿಗೂ ಸಮಾನವಾಗಿ ಕೆಲಸ ಮಾಡುತ್ತದೆ. ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ಕಾಂಗ್ರೆಸ್ ಸರಕಾರ ಇರುವಾಗಲೂ ಸಿಬಿಐ ಹಲವಾರು ಜನರ ತನಿಖೆ ಮಾಡಿದೆ. ಈಗ ಬಿಜೆಪಿ ರಾಜಕೀಯ ದುರುದ್ದೇಶದಿಂದ ಸಿಬಿಐಯನ್ನು ಬಳಸುತ್ತಿದೆ ಎನ್ನುವುದಾದರೆ, ಕಾಂಗ್ರೆಸ್ ಕೂಡ ಸಿಬಿಐ ಅನ್ನು ದುರುಪಯೋಗ ಪಡಿಸಿತ್ತಾ ಎಂದು ಕೇಳಬೇಕಾಗುತ್ತದೆ ಎಂದು ನಳಿನ್ ಕುಮಾರ್ ಅವರು ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.
ಮಸ್ಕಿ-ಬಸವ ಕಲ್ಯಾಣದಲ್ಲಿ ನಮ್ಮದೇ ಗೆಲುವು
ಮಸ್ಕಿ ಮತ್ತು ಬಸವಕಲ್ಯಾಣ ಉಪ ಚುನಾವಣೆಯ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಳಿನ್ ಕುಮಾರ್ ಕಟೀಲು, ಎರಡೂ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಬಂದಿದ್ದೇವೆ. ಎರಡು ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ಚುನಾವಣೆಯ ಗೆಲುವಿಗಾಗ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಲ್ಲಿ ಈಗಾಗಲೇ ಪ್ರಮುಖರ ನಿಯೋಜನೆ ಮಾಡಿದ್ದು, ಅವರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.
ಉಗ್ರಸಂಘಟನೆ ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ
ಮಂಗಳೂರಿನಲ್ಲಿ ಲಷ್ಕರ್ -ಇ- ತೊಯ್ಬಾ ಬೆಂಬಲಿಸಿ ಗೋಡೆ ಬರಹದ ಕುರಿತು ಪ್ರತಿಕ್ರಿಯಿಸಿದ ನಳಿನ್ ಕುಮಾರ್, ರಾಷ್ಟ್ರ ವಿರೋ ಬರಹಗಳು ಮತ್ತು ಘೋಷಣೆಗಳನ್ನು ಯಾರೇ ಹಾಕಿದ್ದರೂ ಅವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಯಾವುದೇ ವಿಮಾನ ನಿಲ್ದಾಣಕ್ಕೆ ಹೆಸರಿಡಲು ನಿಯಮಗಳು ಇವೆ. ಎಲ್ಲರ ಅಭಿಪ್ರಾಯ ಪಡೆದುಕೊಂಡೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ದಕ್ಷಿಣ ಕನ್ನಡ ಸಂಸದರೂ ಆಗಿರುವ ನಳಿನ್‍ಕುಮಾರ್ ಕಟೀಲು ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ