ಬೆಂಗಳೂರು: ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಸಂಬಂಧ ಚರ್ಚೆ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಚಾರವನ್ನು ಸಿಎಂ ಅವರೇ ನಿರ್ಧರಿಸಬೇಕು. ಅಲ್ಲದೇ ಸಿಎಂ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಯಾವಾಗ ಹೈಕಮಾಂಡ್ ಜತೆ ಮಾತಾಡಬೇಕು, ಸಂಪುಟ ವಿಸ್ತರಣೆ ಮಾಡಬೇಕು ಎನ್ನುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಯಡಿಯೂರಪ್ಪ ಹಾಗೂ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದರು.
ನಾಳೆಯಿಂದ ಶಾಸನಸಭೆ ಆರಂಭಗೊಳ್ಳಲಿದೆ. ಚರ್ಚೆ ಮಾಡುವುದಕ್ಕೆ ಸಾಕಷ್ಟು ವಿಷಯವಿದೆ. ಯಾವಾಗ ಯಾರನ್ನು ಮಂತ್ರಿಗಳನ್ನಾಗಿ ಮಾಡಬೇಕು ಎನ್ನುವುದು ಮುಖ್ಯಮಂತ್ರಿಗಳ ಪರಮಾಕಾರ. ಹೈಕಮಾಂಡ್ ಜೊತೆ ಮಾತನಾಡುವುದು ಅವರ ವಿವೇಚನೆ. ಅವರ ರಾಜಕೀಯ ಅನುಭವ ಯಾವಾಗ ಮಾತನಾಡಬೇಕೋ ಮಾತನಾಡುತ್ತಾರೆ. ಕಾದು ನೋಡಬೇಕು ಎಂದರು.
ಈ ಮೂಲಕ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಪಕ್ಷದ ನಾಯಕರೆಲ್ಲರೂ ಸಂಪುಟ ವಿಸ್ತರಣೆ ಸಂಬಂಧ ಇದ್ದ ಚರ್ಚೆಗಳಿಗೆ ತೆರೆ ಎಳೆದಿದ್ದು, ಪ್ರತಿಪಕ್ಷಗಳ ಬಾಯಿ ಮುಚ್ಚಿಸಿದಂತಾಗಿದೆ.