ಕೊರೊನಾ ಸೋಂಕಿನ ಹಾವಳಿ ಮಧ್ಯೆಯೇ ಡೆಂಘೀ, ಚಿಕೂನ್‍ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಸದ್ದು ಮಾಡಲು ಶುರು ಮಾಡಿವೆ

ಬೆಂಗಳೂರು,ಆ.6- ಕೊರೊನಾ ಸೋಂಕಿನ ಹಾವಳಿ ಮಧ್ಯೆಯೇ ಡೆಂಘೀ, ಚಿಕೂನ್‍ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಸದ್ದು ಮಾಡಲು ಶುರು ಮಾಡಿವೆ.

ಸತತ ಹಲವು ದಿನಗಳಿಂದ ಮೊಡ ಮುಸುಕಿದ ವಾತವರಣದ ನಡುವೆಯೂ ಭಾರಿ ಮಳೆಯಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ.

ಕೊರೊನಾ ಮೂರನೆ ಅಲೆಯಿಂದ ಬಚಾವಾಗಲು ಸನ್ನದ್ಧರಾಗಿರುವ ಜನ ಇದೀಗ ಸಾಂಕ್ರಾಮಿಕ ರೋಗದಿಂದ ಪಾರಾಗಲು ಪರದಾಡಬೇಕಾದ ಪರಿಸ್ಥಿತಿ ಬಂದೋದಗಿದೆ.

ಸಾಮಾನ್ಯವಾಗಿ ಪ್ರತಿವರ್ಷ ರಾಜ್ಯದಲ್ಲಿ ಸಾವಿರಾರು ಮಂದಿಗೆ ಸಾಂಕ್ರಾಮಿಕ ರೋಗಳು ಕಾಣಿಸಿಕೊಳ್ಳುತಿತ್ತು.

ಆದರೆ, ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಜನ ಸ್ವಚ್ಛತೆಗೆ ಆದ್ಯತೆ ನೀಡಿದ ಹಿನ್ನೆಯಲ್ಲಿ ಸಾಂಕ್ರಾಮಿಕ ರೋಗದ ಪ್ರಮಾಣ ಕ್ಷೀಣಿಸಿತ್ತು.

ಆದರೆ, ಕಳೆದ ಜನವರಿಯಿಂದ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿರುವುದು ಅಂಕಿ ಅಂಶಗಳಿಂದ ಸಾಬೀತಾಗಿದೆ.

ರಾಜ್ಯದಲ್ಲಿ 17,833 ಮಂದಿಗೆ ಡೆಂಘೀ ಸೋಂಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದುವರೆಗೂ 11 ಸಾವಿರ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ ಸುಮಾರು ಒಂದೂವರೆ ಸಾವಿರ ಮಂದಿಗೆ ಸಾಂಕ್ರಾಮಿಕ ರೋಗ ತಗಲಿರುವುದು ದೃಢಪಟ್ಟಿದೆ.

ಒಂದೂವರೆ ಸಾವಿರ ಮಂದಿಗೂ ಅಧಿಕ ಮಂದಿಗೆ ಡೆಂಘಿ ಕಾಣಿಸಿಕೊಂಡಿದ್ದರೂ ಸಾಂಕ್ರಾಮಿಕ ರೋಗಕ್ಕೆ ಈವರೆಗೆ ಯಾರು ಮೃತಪಟ್ಟಿಲ್ಲ ಎನ್ನುವುದು ಸಾಮಾಧನಕರ ಸಂಗತಿ.

ಬಿಬಿಎಂಪಿ ವ್ಯಾಪ್ತಿಯಲ್ಲಿ 1044 ಜನರ ರಕ್ತಪರೀಕ್ಷೆ ನಡೆಸಲಾಗಿದ್ದು, 256 ಮಂದಿಗೆ ಡೆಂಘೀ ಇರುವುದು ದೃಢಪಟ್ಟಿದೆ.

ಆ.2 ರಂದು ತಪಾಸಣೆಗೆ ಒಳಗಾದ 267 ಮಂದಿಯಲ್ಲಿ 64 ಮಂದಿಗೆ ಡೆಂಘೀ ಕಾಣಿಸಿಕೊಂಡಿದೆ.

ಚಿಕೂನ್‍ಗುನ್ಯಾ ಗುಮ್ಮ: ಡೆಂಘೀ ಜತೆಗೆ ಚಿಕೂನ್‍ಗುನ್ಯಾದ ಕಾಟವೂ ಮೀತಿ ಮೀರಿದೆ. ಜನವರಿಯಿಂದ ಇಲ್ಲಿಯವರೆಗೆ 8663 ಮಂದಿಯಲ್ಲಿ ಚಿಕೂನ್‍ಗುನ್ಯಾ ಪತ್ತೆಯಾಗಿದೆ.

8663 ಮಂದಿಯಲ್ಲಿ ತಪಾಸಣೆ ನಡೆಸಿಕೊಂಡ 4985 ಮಂದಿಯಲ್ಲಿ ಸುಮಾರು 600 ಮಂದಿಯಲ್ಲಿ ಚಿಕೂನ್‍ಗುನ್ಯಾ ಇರುವುದು ಸಾಬೀತಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 18 ಮಂದಿಗೆ ಚಿಕೂನ್ ಗುನ್ಯಾ ಕಾಣಿಸಿಕೊಂಡಿರುವುದು ಅತಂಕಕ್ಕೆ ಕಾರಣವಾಗಿದೆ. ಆದರೆ ಚಿಕೂನ್ ಗುನ್ಯಾದಿಂದ ಇದುವರೆಗೂ ಯಾರು ಪ್ರಾಣ ಕಳೆದುಕೊಂಡಿಲ್ಲ.

ಎಲ್ಲಿ ಹೆಚ್ಚು: ಬೆಂಗಳೂರು ಗ್ರಾಮಾಂತರ,ಶಿವಮೊಗ್ಗ, ಕೋಲಾರ, ವಿಜಯಪುರ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿರುವುದರಿಂದ ಜನ ಎಚ್ಚರಿಕೆ ವಹಿಸುವ ಅಗತ್ಯವಿದೆ.

ಎಚ್ಚೆತ್ತ ಆರೋಗ್ಯ ಇಲಾಖೆ: ಕೊರೊನಾ ಸೋಂಕಿನ ಹಾವಳಿ ನಡುವೆಯೇ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ರೋಗ ತಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗಳಿಗೆ ತೆರಳಿ ಲಾರ್ವಾ ಸರ್ವೇ ಕಾರ್ಯ ನಡೆಸುತ್ತಿದ್ದಾರೆ.

ಸೊಳ್ಳೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಿಸುತ್ತಿದ್ದಾರೆ.

ಒಟ್ಟಾರೆ ಕೊರೊನಾ ಸೋಂಕಿನಿಂದ ಹೈರಾಣಗಿರುವ ಜನ ದಿನೇ ದಿನೇ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗದಿಂದ ರಕ್ಷಣೆ ಮಾಡಿಕೊಳ್ಳವತ್ತಲೂ ಗಮನ ಹರಿಸಬೇಕಾದ ಅವಶ್ಯಕತೆ ಹೆಚ್ಚಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ