ಹೊಸದಿಲ್ಲಿ :ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಡೆಯಲು ಫಾಸ್ಟ್ಟ್ಯಾಗ್ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ, ಈಗ ಕ್ಯೂಆರ್ ಕೋಡ್ ಹೊಂದಿರುವ ಏಕರೂಪದ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರ ಜಾರಿಗೆ ತರಲು ಯೋಜನೆ ರೂಪಿಸಿದೆ. ಅಲ್ಲದೇ ಈ ವ್ಯವಸ್ಥೆಯಿಂದ ವಾಹನ ಕಳ್ಳತನಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎಂದು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ಸಾರಿಗೆ ಸಚಿವಾಲಯ ತಿಳಿಸಿದೆ.
ದೇಶಾದ್ಯಂತ ಶೀಘ್ರವೇ ಎಲ್ಲ ವಾಹನಗಳಿಗೂ ಏಕರೂಪ ಪಿಯುಸಿ ಪ್ರಮಾಣಪತ್ರ ತರಲಿದ್ದು, ಇದು ಅಗತ್ಯ ಮಾಹಿತಿ ಒಳಗೊಂಡ ಕ್ಯೂಆರ್ ಕೋಡ್ ಜತೆಗೆ ಇರಲಿದೆ ಎಂದು ಮಾಹಿತಿ ನೀಡಿದೆ.
ವಾಹನ ಮಾಲೀಕರ ಮಾಹಿತಿ, ವಾಹನದ ಮಾಹಿತಿ ಹಾಗೂ ಹೊಗೆ ಹೊರಸೂಸುವಿಕೆಯ ಪ್ರಮಾಣದ ಮಾಹಿತಿಯನ್ನು ಕ್ಯೂಆರ್ ಕೋಡ್ ಹೊಂದಿರಲಿದೆ.
ಈ ಸಂಬಂಧ ಈಗಾಗಲೇ ಕೇಂದ್ರ ಮೋಟಾರು ವಾಹನ ಕಾಯ್ದೆಗೆ ಸಚಿವಾಲಯ ಅಗತ್ಯ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ. ಇನ್ನು ವಾಹನಗಳನ್ನು ಪಿಯುಸಿ ಕೇಂದ್ರಗಳಿಗೆ ತೆಗೆದುಕೊಂಡು ಹೋದಾಗ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಕಾರಣ, ವಾಹನ ಕಳ್ಳತನವಾಗಿದ್ದರೆ ತಿಳಿದುಬರುತ್ತದೆ.