ಲವ್ ಜಿಹಾದ್ ಸುಗ್ರೀವಾಜ್ಞೆ ಉಪ್ರದಲ್ಲಿ ಮೊದಲ ಪ್ರಕರಣ ದಾಖಲು

ಲಖನೌ : ಲವ್ ಜಿಹಾದ್ ಹಾಗೂ ಬಲವಂತ ಮತಾಂತರಕ್ಕೆ ಕಡಿವಾಣ ಹಾಕಲು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿರುವ ಬೆನ್ನಲ್ಲೇ, ರಾಜ್ಯದಲ್ಲಿ ಮೊದಲ ಲವ್ ಜಿಹಾದ್ ಪ್ರಕರಣ ದಾಖಲಾಗಿದೆ.
ಬರೇಲಿಯ ದೇವರ್ನಿಯನ್ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬರ ತಂದೆ ದೂರು ದಾಖಲಿಸಿದ್ದಾರೆ. ಶರೀಫ್‍ನಗರ ಗ್ರಾಮದ ನಿವಾಸಿ ಉವೈಶ್ ಅಹ್ಮದ್, ತಮ್ಮ ಮಗಳಿಗೆ ಆಮಿಷವೊಡ್ಡಿ ಮತಾಂತರಿಸಲು ಯತ್ನಿಸಿದ್ದಾನೆ ಎಂದು ಯುವತಿ ತಂದೆ ದೂರು ನೀಡಿದ್ದಾರೆ.
ಈ ದೂರಿನ ಆಧಾರದ ಮೇರೆಗೆ ಅಹ್ಮದ್ ವಿರುದ್ಧ ನೂತನ ಕಾನೂನಿನ ಹಾಗೂ ಭಾರತೀಯ ದಂಡ ಸಂಹಿತೆ ಅನ್ವಯ ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಗೃಹ ಸಚಿವಾಲಯದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವನೀಶ್‍ಅವಸ್ತಿ ಹೇಳಿದ್ದಾರೆ.
ಮೋಸದಿಂದ ಅಥವಾ ಬಲವಂತದಿಂದ ಮಾಡಲಾಗುವ ಧಾರ್ಮಿಕ ಮತಾಂತರಗಳ ತಡೆಗೆ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು,ಶನಿವಾರ ಉತ್ತರಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅಂಕಿತ ಹಾಕಿದ್ದಾರೆ.
ಒಂದು ವೇಳೆ ಮೋಸದಿಂದ ಅಥವಾ ಬಲವಂತದಿಂದ ಮತಾಂತರಿಸಿ ವಿವಾಹವಾಗಿರುವುದು, ಸಾಮೂಹಿಕ ಮತಾಂತರ ನಡೆದಿರುವುದು ಪತ್ತೆಯಾದರೆ, ಕನಿಷ್ಠ 50 ಸಾವಿರ ರೂ. ದಂಡ ಹಾಗೂ 5- 10 ವರ್ಷಗಳ ಸೆರೆವಾಸ ವಿಸಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ