ಇಸ್ಲಾಮಾಬಾದ್:ಪಾಕಿಸ್ಥಾನದಾದ್ಯಂತ ಕೋವಿಡ್-19 ತನ್ನ ಎರಡನೇ ಅಲೆಯನ್ನು ತೀವ್ರಗೊಳಿಸಿದ್ದು, ಪಾಕಿಸ್ತಾನದಾದ್ಯಂತ ಆಸ್ಪತ್ರೆಗಳು ಅದರಲ್ಲೂ ತೀವ್ರ ನಿಗಾ ಘಟಕಗಳು ಪೂರಾ ಭರ್ತಿಯಾಗಿವೆ.ಇದರಿಂದಾಗಿ ಪಾಕ್ ಸರಕಾರ ತತ್ತರಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದು, ಈ ಬಾರಿಯ ಕೊರೋನಾ ಬಿಕ್ಕಟ್ಟು ಪಾಕಿಸ್ತಾನದಲ್ಲಿ ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸುವ ಎಲ್ಲ ಅಪಾಯವೂ ಇದೆ. ಇದರಿಂದಾಗಿ ಕೂಡಲೇಎಚ್ಚೆತ್ತುಕೊಂಡು ಜಾಗೃತೆವಹಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಸರಕಾರ ಜನತೆಗೆ ಮನವಿ ಮಾಡಿಕೊಂಡಿದೆ.
ಪಾಕಿಸ್ತಾನದಲ್ಲಿ ಕೋವಿಡ್-19 ಭಾರೀ ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸುವ ಗಂಭೀರ ಅಪಾಯ ಎದುರಾಗಿದೆ.ಎಲ್ಲ ಆಸ್ಪತ್ರೆಗಳೂ ಕೋವಿಡ್ ರೋಗಿಗಗಳಿಂದ ಭರ್ತಿಯಾಗಿವೆ. ಮುಂದಿನ ಎರಡು ವಾರಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಿದೆ ಎಂಬುದಾಗಿ ಪಾಕ್ ಮೆಡಿಕಲ್ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಖೈಸರ್ ಸಜ್ಜದ್ ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲೆ, ಹೊಟೇಲ್ಗಳು ಬಂದ್
ದೇಶದ ಶೇ.95ರಷ್ಟು ಆಸ್ಪತ್ರೆ ಬೆಡ್ಗಳು ಭರ್ತಿಯಾಗಿವೆ. ಕೇವಲ ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರವೇ ಕೆಲವು ಹಾಸಿಗೆಗಳು ಉಳಿದಿವೆ. ಆದರೆ ಬಹುತೇಕ ಆಸ್ಪತ್ರೆಗಳು ಭರ್ತಿಯಾಗಿರುವುದರಿಂದ ರೋಗಿಗಳನ್ನು ಸೇರಿಸಿಕೊಳ್ಳಲು ನಿರಾಕರಿಸುತ್ತಿವೆ.ಈಗ ಕೋವಿಡ್-19ವೈರಾಣು ಹೆಚ್ಚು ಮಾರಕವಾಗಿರುವುದು ಸಾಬೀತಾಗುತ್ತಿದೆ. ಇದೀಗ ಒಮ್ಮೆಲೇ ಪಾಕಿಸ್ತಾನದಲ್ಲಿ ಕೊರೋನಾ ಸೋಂಕು ವ್ಯಾಪಕಗೊಂಡಿರುವುದು ಆಘಾತಕ್ಕೆ ಕಾರಣವಾಗಿದೆ.ಈ ವಾರದಿಂದ ಶಿಕ್ಷಣ ಸಂಸ್ಥೆಗಳು, ಹೊಟೇಲ್ಗಳಲ್ಲಿ ಒಳಾಂಗಣ ವ್ಯಾಪಾರವನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ ಎಂಬುದಾಗಿ ಸಜ್ಜದ್ ತಿಳಿಸಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ , ತನ್ನ ಸರಕಾರವು ಸಂಪನ್ನ ದೇಶಗಳಲ್ಲಿ ಮಾಡಿರುವಂತೆ ಸಂಪೂರ್ಣ ಲಾಕ್ಡೌನ್ಗಳಿಗೆ ಮುಂದಾಗಿಲ್ಲ ಎಂದು ಹೇಳಿಕೊಂಡಿದ್ದು, ಆದರೆ ಈಗ ಎರಡನೇ ಹಂತದಲ್ಲಿ ಸೋಂಕು ಭಾರೀ ವೇಗದಲ್ಲಿ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹದಗೆಡುವುದನ್ನು ತಪ್ಪಿಸಲು ಜನತೆ ಪೂರ್ಣ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಆಗ್ರಹಿಸಿದ್ದಾರೆ.
ಮತೀಯವಾದಿಗಳೇ ಸವಾಲು
ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಮತೀಯವಾದಿಗಳು, ತೀವ್ರವಾದಿಗಳೇ ಸೋಂಕು ತಡೆಯುವಲ್ಲಿ ದೊಡ್ಡ ಸವಾಲಾಗಿದ್ದಾರೆ. ಮತಾಂಧ ಗುಂಪುಗಳು, ತೀವ್ರವಾದಿಗಳು ಮಾಸ್ಕ್ ಸೇರಿದಂತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ಹಾಗೂ ಉದ್ಧಟ ನಿಲುವು ತಳೆಯುತ್ತಿರುವುದು ಸರಕಾರಕ್ಕೆ ತೀವ್ರ ಸಂಕಷ್ಟ ತಂದೊಡ್ಡಿದೆ. ಕಟ್ಟರ್ ಮತೀಯವಾದಿ ಖದೀಮ್ ಹುಸೈನ್ ರಿಜ್ವಿ ಹಠಾತ್ ಆಗಿ ಜ್ವರ ಮತ್ತು ಉಸಿರಾಟದ ಸಮಸ್ಯೆಗೆ ಸಿಲುಕಿ ಸಾವಿಗೀಡಾಗಿದ್ದರೂ, ಆತನ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ. ಇದರ ಬದಲಾಗಿ ಲಾಹೋರ್ನಲ್ಲಿ ನಡೆದ ಆತನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿರುವುದು ಪಾಕ್ ಸರಕಾರಕ್ಕೆ ತೀವ್ರ ಚಿಂತೆಯನ್ನುಂಟು ಮಾಡಿದೆ. ಯಾಕೆಂದರೆ ಅಲ್ಲಿ ಯಾವುದೇ ಕೋವಿಡ್-19ನಿಯಮಗಳ ಪಾಲನೆಯಾಗಿಲ್ಲ. ಇದು ಮುಂದಿನ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುವ ಭೀತಿಯನ್ನುಂಟು ಮಾಡಿದೆ ಎಂದು ಸರಕಾರಿ ಅಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವಿಪಕ್ಷಗಳು ಹಮ್ಮಿಕೊಂಡಿರುವ ರ್ಯಾಲಿಗಳೂ ಸರಕಾರಕ್ಕೆ ಆತಂಕ ಉಂಟು ಮಾಡಿದ್ದು, ಇತ್ತ ವೈದ್ಯಕೀಯ ಸಂಸ್ಥೆಗಳು ದೇಶದಲ್ಲಿ ಪರಿಸ್ಥಿತಿ ಪೂರ್ತಿ ಕೈಮೀರುವ ಮುನ್ನ ಪೂರ್ಣ ಲಾಕ್ಡೌನ್ ವಿಸುವಂತೆ ಸರಕಾರವನ್ನು ಆಗ್ರಹಿಸುತ್ತಿವೆ.