ಹೊಸದಿಲ್ಲಿ: ಮುಂಬರುವ 2024ರ ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 120 ದಿನಗಳ ರಾಷ್ಟ್ರವ್ಯಾಪಿ ಪ್ರವಾಸ ಮೂಲಕ ಬಿಜೆಪಿ ಈಗಿನಿಂದಲೇ ಪಕ್ಷ ಸಂಘಟನೆಗಾಗಿ ತಯಾರಿ ನಡೆಸಿದೆ. ಉತ್ತರಾಖಂಡದಲ್ಲಿ ಡಿಸೆಂಬರ್ ಮೊದಲ ವಾರದಿಂದಲೇ ನಡ್ಡಾ ತಮ್ಮ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ.
ಡಿ. 5ರಂದು ನಡ್ಡಾ ಪ್ರವಾಸ ಆರಂಭವಾಗಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.
ಪಕ್ಷ ಸಂಘಟನೆಗಾಗಿ ಬಿಜೆಪಿ ಅಧ್ಯಕ್ಷರು ಪ್ರತಿ ರಾಜ್ಯಕ್ಕೂ ಭೇಟಿ ನೀಡಿ ಪಕ್ಷದ ಎಲ್ಲ ಬೂತ್ ಮಟ್ಟದ ಪ್ರಮುಖರು, ಜಿಲ್ಲಾ ಅಧ್ಯಕ್ಷರು ಸೇರಿ ಪ್ರತಿಯೊಬ್ಬ ಸಂಸದರು ಹಾಗೂ ಶಾಸಕರೊಂದಿಗೂ ವರ್ಚುವಲ್ ಸಭೆ ನಡೆಸಲಿದ್ದಾರೆ.
ಇದಲ್ಲದೆ, ಕೆಲ ಬೂತ್ಗಳಿಗೆ ಸ್ವತಃ ಭೇಟಿ ನೀಡಿ ತಳಮಟ್ಟದ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಪ್ರವಾಸದ ವೇಳೆ, 2019ರಲ್ಲಿ ಬಿಜೆಪಿ ಜಯಗಳಿಸದ ಪ್ರದೇಶಗಳಿಗೆ ಹೆಚ್ಚಿನ ಗಮನ ನೀಡಿ ಈ ಬಾರಿ ಆ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಪಕ್ಷ ಸಂಘಟಿಸಲು ಪಕ್ಷದ ಮುಖಡರೊಂದಿಗೆ ನಡ್ಡಾ ತಂತ್ರಗಾರಿಕೆ ನಡೆಸಲಿದ್ದಾರೆ. ಅದೇ ರೀತಿ ಮುಂದಿನ ವರ್ಷ ಪಶ್ಚಿಮ ಬಂಗಾಳ, ಕೇರಳ, ತಮಿಳು ನಾಡು ಮತ್ತು ಅಸ್ಸಾಂನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಿದ್ಧತೆಯನ್ನು ಸಹ ಪರಿಶೀಲಿಸಲಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.