ಹೊಸದಿಲ್ಲಿ: ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್ಸ್ಟಾರ್ನಂತಹ ಒಟಿಟಿ (ಓವರ್ ದಿ ಟಾಪ್) ವೇದಿಕೆಗಳು ಹಾಗೂ ಇತರೆ ಆನ್ಲೈನ್ ಮಾಧ್ಯಮದಂತಹ ಡಿಜಿಟಲ್ ಕಂಟೆಂಟ್ಗಳನ ಕೇಂದ್ರ ಸರ್ಕಾರ ಮಾಹಿತಿ ಮತ್ತು ಪ್ರಸಾರ (ಐ ಆ್ಯಂಡ್ ಬಿ) ಸಚಿವಾಲಯದ ನಿಯಂತ್ರಣಕ್ಕೆ ವಹಿಸುವ ಆದೇಶವನ್ನು ಹೊರಡಿಸಿದೆ.
ಆ ಮೂಲಕ ಡಿಜಿಟಲ್ ಕಂಟೆಂಟ್ಗಳಿಗೆ ನೀತಿ ಮತ್ತು ನಿಯಮಗಳನ್ನು ರೂಪಿಸುವ ಅಕಾರವನ್ನೂ ಸಹ ಕೇಂದ್ರ ಸಚಿವಾಲಯಕ್ಕೆ ನೀಡಿದೆ.
ಇಲ್ಲಿಯವರೆಗೆ ದೇಶದಲ್ಲಿ ಡಿಜಿಟಲ್ ವೇದಿಕೆ ನಿರ್ವಹಣೆಗೆಂದು ಸ್ವಾಯತ್ತ ಮಂಡಳಿಯಾಗಲಿ ಅಥವಾ ಕಾನೂನಾಗಲಿ ಇರಲಿಲ್ಲ. ಈ ಸಂಬಂಧ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿ ಹಾಕಿರುವ ಅಸೂಚನೆಯನ್ನು ಸಂಪುಟ ಸಚಿವಾಲಯ ತಕ್ಷಣದಿಂದಲೇ ಜಾರಿಗೊಳಿಸಿದೆ. ಅದರಂತೆ, ಡಿಜಿಟಲ್ ಕಂಟೆಂಟ್ಗೆ ಸಚಿವಾಲಯ ರೂಪಿಸುವ ನಿಯಮಗಳನ್ನು 2020ರ 357ನೇ ತಿದ್ದುಪಡಿ ನಿಯಮಗಳು (ವ್ಯವಹಾರದ ಹಂಚಿಕೆ) ಎಂದು ಕರೆಯಲಾಗುತ್ತದೆ.
ಮನರಂಜನಾ ಮಾಧ್ಯಮವಾಗಿ ರೂಪುಗೊಂಡಿರುವ ಒಟಿಟಿಗಳು ಈ ಹಿಂದೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಗೆ ಒಳಪಡಿಸಲಾಗಿತ್ತಾದರೂ, ಇವುಗಳ ನಿಯಂತ್ರಣಕ್ಕೆ ಯಾವುದೇ ಕಾನೂನು ಇರಲಿಲ್ಲ. ಸರ್ಕಾರದ ಹೊಸ ಆದೇಶದ ಅನ್ವಯ ಇನ್ನು ಮುಂದೆ ಆನ್ಲೈನ್ ಕಂಟೆಂಟ್ ಪೂರೈಕೆದಾರರಿಂದ ಲಭ್ಯವಾಗುವ ಸುದ್ದಿ, ಚಲನ ಚಿತ್ರಗಳು ಮತ್ತು ಆಡಿಯೋ-ವಿಷುವಲ್ ಕಾರ್ಯಕ್ರಮಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸುಪರ್ದಿಗೆ ಒಳಪಡಲಿದೆ.