ಡಿಕೆಶಿಗೆ ಜಾಮೀನೋ ಅಥವಾ ಜೈಲೋ?; ಇಂದು ನಿರ್ಧಾರ

ಬೆಂಗಳೂರು: ದೆಹಲಿಯ ನಿವಾಸದಲ್ಲಿ ಪತ್ತೆಯಾದ 8.6 ಕೋಟಿ ಪ್ರಕರಣದ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಒಳಪಟ್ಟಿರುವ ಮಾಜಿ ಸಚಿವ, ಕಾಂಗ್ರೆಸ್​ ಪ್ರಬಲ ನಾಯಕ ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಇಡಿ ವಿಶೇಷ ನ್ಯಾಯಾಲಯ ನಡೆಸಲಿದೆ. ಹೀಗಾಗಿ ಡಿಕೆಶಿ ಪಾಲಿಗೆ ಇಂದು ಮಹತ್ವದ ದಿನವಾಗಿದೆ.

ನಿನ್ನೆ ಇಡಿ ಪರ ವಕೀಲ ಕೆ.ಎಂ. ನಟರಾಜ್​ ವಾದ ಮಂಡಿಸಿದ್ದರು. “ಕಳೆದ 14 ದಿನಗಳಿಂದ ಡಿಕೆಶಿ ಇಡಿ ವಿಚಾರಣೆಗೆ ಒಳಪಟ್ಟಿದ್ದರು. ಆದರೆ ಶಿವಕುಮಾರ್ 2ನೇ ಬಾರಿ ಕಸ್ಟಡಿಗೆ ಬಂದಾಗ ಅವರು ಆಸ್ಪತ್ರೆಯಲ್ಲೇ ಇದ್ದರು. ಹೀಗಾಗಿ ಪರಿಣಾಮಕಾರಿ ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ವೈದ್ಯರ ಪ್ರಮಾಣಪತ್ರವನ್ನು ಕೋರ್ಟಿಗೆ ಸಲ್ಲಿಸುತ್ತಿದ್ದೇವೆ. ಕಸ್ಟಡಿ ಅವಧಿ ವೇಳೆ ಮುಖಾಮುಖಿ ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನ್ಯಾಯಾಂಗ ಬಂಧನದಲ್ಲಿ ವಿಚಾರಣೆ ಮಾಡಬೇಕಾದ ಅಗತ್ಯವಿದೆ. ಇನ್ನೂ ಒಬ್ಬರಿಗೆ ಸಮನ್ಸ್ ನೀಡಬೇಕಾಗಿದೆ. ಅವರೊಂದಿಗೆ ಡಿಕೆಶಿಯನ್ನು ಮುಖಾಮುಖಿ ವಿಚಾರಣೆ ಮಾಡಬೇಕಿದೆ. ನ್ಯಾಯಾಂಗ ಬಂಧನದಲ್ಲಿ ವಿಚಾರಣೆ ನಡೆಸಲು ಇಡಿಗೆ ಅನುಮತಿ ಕೊಡಿ.  ಡಿಕೆಶಿ ಆರೋಗ್ಯದ ಬಗ್ಗೆ ಇಡಿ ನಿಗಾ ವಹಿಸಲಿದೆ. ಅಗತ್ಯ ಚಿಕಿತ್ಸೆ ಕೊಡಿಸಲಿದೆ ಎಂದು,” ನಾಗರಾಜ್ ಹೇಳಿದ್ದರು.

ಡಿಕೆಶಿ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹ್ಟಗಿ, ದಯನ್ ಕೃಷ್ಣನ್ ವಾದ ಮಂಡಿಸುತ್ತಿದ್ದಾರೆ. “ಇತ್ತೀಚೆಗೆ ಡಿಕೆಶಿ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಹೀಗಾಗಿ ಅವರ ಆರೋಗ್ಯ ಗಮನದಲ್ಲಿಟ್ಟುಜಾಮೀನು ನೀಡಿ. ಅವರು ಕರೆದಾಗೆಲ್ಲಾ ಬಂದು ವಿಚಾರಣೆ ಎದುರಿಸಲು ಸಿದ್ಧರಿದ್ದಾರೆ. ಡಿ.ಕೆ. ಶಿವಕುಮಾರ್ ಯಾವುದೇ ಅಕ್ರಮ ಮಾಡಿಲ್ಲ. ಹೀಗಾಗಿ ಅವರಿಗೆ ಜಾಮೀನು ನೀಡಿ,” ಎಂದು ಡಿಕೆಶಿ ಪರವಾಗಿ ಕೋರಲಾಗಿತ್ತು. ವಾದ ಪ್ರತಿವಾದ ಆಲಿಸಿರುವ ನ್ಯಾ. ಅಜಯ್ ಕುಮಾರ್ ಕುಹಾರ್ ಇಂದು ತೀರ್ಪು ಪ್ರಕಟ ಮಾಡಲಿದ್ದಾರೆ.

ಇನ್ನೊಂದೆಡೆ ಡಿಕೆಶಿಗೆ ಆಸ್ಪತ್ರೆಯೋ, ಜೈಲೋ ಎಂದು ವೈದ್ಯರು ನಿರ್ಧರಿಸಲಿದ್ದಾರೆ. ವೈದ್ಯರು ಆರೋಗ್ಯ ಸ್ಥಿರ ಎಂದು ದೃಢಪಡಿಸಿದರೆ ಡಿಕೆಶಿ ಜೈಲು ಸೇರಲಿದ್ದಾರೆ. ಆರೋಗ್ಯ ಸರಿಯಿಲ್ಲ ಎಂದು ಹೇಳಿದರೆ ಆರ್​​ಎಂಎಲ್​ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ