![pinaray](http://kannada.vartamitra.com/wp-content/uploads/2020/11/pinaray-677x450.jpg)
ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಈಗಾಗಲೇ ಇಕ್ಕಟ್ಟಿಗೆ ಸಿಲುಕಿರುವ ಕೇರಳ ಸರಕಾರಕ್ಕೆ ಇದೀಗ, ಮತ್ತೊಂದು ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪದ ಮೇಲೆ ತನಿಖೆ ನಡೆಸಲು ಕೇಂದ್ರ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಲು ಮುಂದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಜ್ಯ ಸರಕಾರದ ನೇತೃತ್ವದಲ್ಲಿ ಬೃಹತ್ ಹೂಡಿಕೆಯೊಂದಿಗೆ ಜಾರಿಗೆ ತರಲು ಚಿಂತನೆ ನಡೆಸಿದ್ದ ಕೆ-ಪೊನ್, ಇ-ಮೊಬಿಲಿಟಿ, ಡೌನ್ಟೌನ್ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳ ಇದೀಗ ಸರಕಾರಕ್ಕೆ ಉರುಳಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕಡಿಮೆ ಬೆಲೆಯ ಅತಿ ವೇಗದ ಇಂಟರ್ ನೆಟ್ ಒದಗಿಸುವ ಮತ್ತು ಬಡ ಕುಟುಂಬಗಳು ಹಾಗೂ ಸರಕಾರಿ ಕಚೇರಿಗಳಿಗೆ ಕೇಬಲ್ ಇಂಟರ್ ನೆಟ್ ಒದಗಿಸುವ ಹೆಸರಿನಲ್ಲಿರುವ ಯೋಜನೆ ಇದಾಗಿತ್ತು.
ಈ ಬೃಹತ್ ಯೋಜನೆಗಳ ಬಗ್ಗೆ ಸಮಗ್ರ ವಿಚಾರಣೆ ನಡೆಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಆಪ್ತ ಕಾರ್ಯದರ್ಶಿ ಎಂ.ಶಿವಶಂಕರ್ ಕರ್ತವ್ಯದಲ್ಲಿದ್ದಾಗ ಕೈಗೊಂಡಿದ್ದ ಈ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಜಾರಿ ನಿರ್ದೇಶನಾಲಯವು ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಕೇಳಿದೆ. ಇತ್ತೀಚಿನ ಬೃಹತ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್ ಶಾಮೀಲಾತಿ ಬಗ್ಗೆ ಗಂಭೀರ ಆರೋಪಗಳು ಬಂದಿದ್ದು, ಇದು ದೇಶದ ಸುರಕ್ಷೆ ಜೊತೆಗೂ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಈ ತನಿಖೆ ಗಮನ ಸೆಳೆದಿದೆ.
ಕೆ-ಪೊನ್ ಯೋಜನೆಯ ಬಗ್ಗೆ ಕೇಂದ್ರ ಇಡಿ ಅಕಾರಿಗಳು ಆಂತರಿಕ ತನಿಖೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಯೋಜನೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಆಪ್ತ ಕಾರ್ಯದರ್ಶಿ ಎಂ.ಶಿವಶಂಕರ್ ಅಲ್ಲದೆ ರಾಜ್ಯದ ಇತರ ಐಎಎಸ್ ಅಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ಇಡಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ರಾಜಕೀಯ ಬಣ್ಣ ನೀಡಲು ಸಿಪಿಎಂ ಯತ್ನ
ಆದರೆ ಚುನಾವಣೆಗೆ ಮೊದಲು ಕೇಂದ್ರ ತನಿಖಾ ಏಜೆನ್ಸಿಗಳನ್ನು ಬಳಸಿಕೊಂಡು ರಾಜ್ಯ ಸರಕಾರ ಮತ್ತು ಸಿಪಿಎಂ ಪಕ್ಷವನ್ನು ಅಸ್ಥಿರಗೊಳಿಸಲು ಕೇಂದ್ರ ಸರಕಾರವು ಪ್ರಯತ್ನಿಸುತ್ತಿದೆ ಎಂದು ಸಿಪಿಎಂ ಕೇಂದ್ರ ಸಮಿತಿಯು ಆಪಾದಿಸಿದೆ. ಕೇರಳದಲ್ಲಿ ಕೇಂದ್ರ ಏಜೆನ್ಸಿಗಳು ಕೆಲವರನ್ನು ಬಂಸಿರುವ ಹಿಂದೆ ರಾಜಕೀಯ ಹಸ್ತಕ್ಷೇಪವಿದೆ ಎಂದೂ ಸಿಪಿಎಂ ದೂರಿದೆ. ಆದರೆ ಕೇರಳ ಬಿಜೆಪಿ ಇದನ್ನು ತಿರಸ್ಕರಿಸಿದ್ದು, ಮೇಲ್ನೋಟಕ್ಕೇ ರಾಜ್ಯದಲ್ಲಿ ಸಿಪಿಎಂ ದುರಾಡಳಿತ ಹೇಗೆ ಸಾಗುತ್ತಿದೆ ಎಂಬುದರ ಬಗ್ಗೆ ಜನಾಭಿಪ್ರಾಯಗಳಿರುವುದನ್ನು ಉಲ್ಲೇಖಿಸಿದೆ.