ಬಿಜೆಪಿಯ ತಡೆಯಲು ಕೇರಳದ ಎರಡು ರಂಗಗಳ ಹೆಣಗಾಟ ಕಾಂಗ್ರೆಸ್ ನಷ್ಟದಲ್ಲಿ ಸಿಪಿಎಂಗೆ ಆಯಿತು ಲಾಭ !

ತಿರುವನಂತಪುರಂ: ಕೇರಳದಲ್ಲಿ ಡಿ.8,10,14ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಲವು ರಾಜಕೀಯ ತಿರುವುಗಳು ಗೋಚರಿಸಿವೆ.ಈ ಬಾರಿ ಬಿಜೆಪಿ ಪ್ರಬಲ ಶಕ್ತಿಯಾಗುವುದನ್ನು ಹೇಗಾದರೂ ಮಾಡಿ ತಡೆಯಬೇಕೆಂದು ಸಿಪಿಎಂ ನೇತೃತ್ವದ ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹೆಣೆದ ತಂತ್ರ, ಹೊಂದಾಣಿಕೆಗಳ ಫಲವಾಗಿ ಕಾಂಗ್ರೆಸ್ ಕೇರಳದಲ್ಲಿ ಹೀನಾಯ ಸೋಲುಣ್ಣುವಂತಾಗಿದೆ.ಬಿಜೆಪಿ ಉಭಯರಂಗಗಳ ಪ್ರಬಲ ಸವಾಲನ್ನೆದುರಿಸಿಯೂ ತನ್ನ ನೆಲೆಗಳನ್ನು ವಿಸ್ತರಿಸಿರುವುದು ಈ ಬಾರಿಯೂ ಸ್ಪಷ್ಟವಾಗಿ ಗೋಚರಿಸಿದೆ.
ಕಾಂಗ್ರೆಸ್ ಪತನ
ಕಾಂಗ್ರೆಸ್ ಅನೇಕ ಕಡೆಗಳಲ್ಲಿ ಹೀನಾಯ ಸೋಲುಂಡ ಪರಿಣಾಮ ಆಳುವ ಎಡರಂಗ ತನ್ನ ಸ್ಥಾನಬಲವನ್ನು ಹಿಗ್ಗಿಸಿಕೊಂಡು ಬೀಗಲು ಸಾಧ್ಯವಾಗಿದೆ.ಇದೀಗ ಈ ಸೋಲು ಕಾಂಗ್ರೆಸ್‍ನೊಳಗೆ ಭಾರೀ ತುಮುಲ ಸೋಟಗೊಳ್ಳಲೂ ಕಾರಣವಾಗಿದೆ.ರಾಜಧಾನಿ ತಿರುವನಂತಪುರಂ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಅಕಾರಕ್ಕೆ ಬರುವುದನ್ನು ತಡೆಯಲು ಆಳುವ ಎಡರಂಗವು, ಬಿಜೆಪಿ -ಹಿಂದುತ್ವ ಎಂದು ಮುಸ್ಲಿಮರಲ್ಲಿ ಭಯ ಹುಟ್ಟಿಸಿ ಅವರ ಮತಗಳನ್ನು ತನ್ನತ್ತ ಸೆಳೆದು 51ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿ 34ಸ್ಥಾನಗಳನ್ನು ಗೆದ್ದು ಪ್ರಬಲ ಪ್ರತಿಪಕ್ಷವಾಗಿ ಮೂಡಿಬಂದಿದೆ. ಕೊನೆಗಳಿಗೆಯಲ್ಲಿ ಯುಡಿಎಫ್ ಮತಗಳ ಬಹುದೊಡ್ಡ ಪಾಲು ಎಡರಂಗಕ್ಕೆ ವಾಲಿದ್ದರಿಂದ ಸುಮಾರು 8ಸ್ಥಾನಗಳಲ್ಲಿ ಬಿಜೆಪಿ ಕಡಿಮೆ ಮತಗಳ ಅಂತರದಿಂದ ಸೋಲಬೇಕಾಯಿತು. ಈ ಮೂಲಕ ಅಕಾರ ಪಡೆಯುವುದರಿಂದ ಸ್ವಲ್ಪದರಲ್ಲೇ ವಂಚಿತವಾಯಿತು.
ಎಡರಂಗ ಕಾಂಗ್ರೆಸ್‍ಗೆ ಥ್ಯಾಂಕ್ಸ್ ಹೇಳಲಿ
ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತನ್ನ ಗೆಲುವಿಗೆ ನೆರವಾದ ಕಾಂಗ್ರೆಸಿಗೆ ಎಡರಂಗ ಥ್ಯಾಂಕ್ಸ್ ಹೇಳಲಿ.ಎರಡು ರಂಗಗಳ ಭಾರೀ ಸವಾಲಿನ ನಡುವೆಯೂ ಬಿಜೆಪಿ ತನ್ನ ನೆಲೆಗಳನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿಕೊಂಡಿದೆ.ಆದರೆ ಕಾಂಗ್ರೆಸ್ ನೆಲೆಗಳು ತೀವ್ರವಾಗಿ ಕುಸಿಯುತ್ತಿರುವುದು ಕಂಡುಬಂದಿದೆ. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಎಡರಂಗ ಮತ್ತು ಬಿಜೆಪಿ ನಡುವೆಯೇ ಪ್ರಮುಖ ಸ್ಪರ್ಧೆ ಏರ್ಪಡಲಿದೆ. ಕೇರಳ ಕಾಂಗ್ರೆಸ್ ಮುಕ್ತವಾಗುವತ್ತ ವೇಗವಾಗಿ ಸಾಗುತ್ತಿದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.
ನಾಯಕತ್ವ ವಿರುದ್ಧ ಕಾಂಗ್ರೆಸಿಗರ ಆಕ್ರೋಶ
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್‍ನ ದುರ್ಬಲ ನಾಯಕತ್ವದಿಂದಾಗಿಯೇ ಯುಡಿಎಫ್‍ಗೆ ಹೀನಾಯ ಸೋಲುಂಟಾಗಿದೆ. ಎದುರಾಳಿ ಪಕ್ಷಗಳಾದ ಎಡರಂಗ ಮತ್ತು ಬಿಜೆಪಿ ತನ್ನ ನೆಲೆಗಳನ್ನು ವಿಸ್ತರಿಸಿಕೊಂಡಿದ್ದರೆ, ಕಾಂಗ್ರೆಸ್ ನೆಲೆಗಳು ಕುಸಿತ ಕಂಡಿವೆ.ಇದಕ್ಕೆ ನಾಯಕತ್ವವೇ ಕಾರಣ ಎಂಬುದಾಗಿ ಹಿರಿಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆ.ಮುರಳೀಧರನ್, ಕೆ.ಸುಧಾಕರನ್, ಕಾಸರಗೋಡು ಸಂಸದ ರಾಜಮೋಹನ್ ಉನ್ನಿತ್ತಾನ್ ಮತ್ತಿತರರು ಕಾಂಗ್ರೆಸ್ ನಾಯಕತ್ವ ವಿರುದ್ಧ ಕಿಡಿ ಕಾರಿದ್ದಾರೆ.
ಮಧೂರು ಪಂ.ನಲ್ಲಿ ಬಿಜೆಪಿ ದಾಖಲೆ !
ಉತ್ತರ ಕೇರಳದ ಕಾಸರಗೋಡು ಜಿಲ್ಲೆಯ ಮಧೂರು ಗ್ರಾ.ಪಂ.ನಲ್ಲಿ ಬಿಜೆಪಿ ಈ ಬಾರಿಯೂ ಭಾರೀ ಬಹುಮತದೊಂದಿಗೆ ಅಕಾರವನ್ನು ಮರಳಿ ಗಳಿಸುವ ಮೂಲಕ ದಾಖಲೆ ಮಾಡಿದೆ. 1980ರಿಂದಲೂ ಮಧೂರು ಪಂಚಾಯತ್‍ನಲ್ಲಿ ಬಿಜೆಪಿ ಸತತ ಅಕಾರಕ್ಕೆ ಬರುತ್ತಿದ್ದು, 40ವರ್ಷಗಳ ಈ ಸಾಧನೆ ಒಂದು ದಾಖಲೆಯಾಗಿದೆ ಎಂಬುದಾಗಿ ಬಿಜೆಪಿ ಬೊಟ್ಟು ಮಾಡಿದೆ.ಕೇರಳದ ಶ್ರೀ ಅಯ್ಯಪ್ಪ ಸನ್ನಿಧಾನ ಇರುವ ಪಂದಳಂ ನಗರಪಾಲಿಕೆಯಲ್ಲಿ ಕೂಡಾ ಈ ಬಾರಿ ಬಿಜೆಪಿ ಎಡರಂಗವನ್ನು ಸೋಲಿಸಿ ಅಕಾರಕ್ಕೇರಿ ಗಮನ ಸೆಳೆದಿದೆ.
6ವಿಧಾನಸಭೆಗಳಲ್ಲಿ ಬಿಜೆಪಿ ಬಲಿಷ್ಠ ಶಕ್ತಿ !
ಕೇರಳದ ಈ ಬಾರಿಯ ಸ್ಥಳೀಯ ಚುನಾವಣೆಗಳ ಫಲಿತಾಂಶವನ್ನು ಗಮನಿಸಿದಾಗ , ಬಿಜೆಪಿ 2016ರಲ್ಲಿ ಗೆದ್ದ ಏಕೈಕ ಕ್ಷೇತ್ರ ನೇಮಮ್ (ಓ .ರಾಜಗೋಪಾಲ್)ವಿಧಾನಸಭಾ ಕ್ಷೇತ್ರದಲ್ಲಿ ಇನ್ನಷ್ಟು ಗಟ್ಟಿಯಾಗಿರುವುದು ಕಂಡುಬಂದಿದೆ.ಅಲ್ಲದೆ ಮಂಜೇಶ್ವರಂ, ಕಾಸರಗೋಡು, ಕಳಕೂಟಂ, ವಟ್ಟಿಯಾರ್‍ಕಾವು, ತಿರುವನಂತಪುರಂ ವಿಧಾನಸಭಾಕ್ಷೇತ್ರಗಳಲ್ಲಿ ಎರಡನೇ ಸ್ಥಾನದೊಂದಿಗೆ ಬಲಿಷ್ಠ ಶಕ್ತಿಯಾಗಿ ಮೂಡಿಬಂದಿದೆ.ವರ್ಕಳ ನಗರಪಾಲಿಕೆಯಲ್ಲಿ ಎಡರಂಗ ಮತ್ತು ಬಿಜೆಪಿ 12ಸ್ಥಾನಗಳೊಂದಿಗೆ ಸಮಬಲ ಹೊಂದಿದ್ದು, ಯುಡಿಎಫ್ 7ಸ್ಥಾನ ಗಳಿಸಿದೆ.ಕೊಚ್ಚಿ ಮಹಾನಗರ ಪಾಲಿಕೆಯಲ್ಲಿ ಎಲ್‍ಡಿಎಫ್-34, ಯುಡಿಎಫ್ 31, ಎನ್‍ಡಿಎ 5 ಸ್ಥಾನ ಪಡೆದರೆ, ತ್ರಿಶೂರು ಮಹಾನಗರ ಪಾಲಿಕೆಯಲ್ಲಿ ಎಡರಂಗ 24, ಯುಡಿಎಫ್ 23, ಎನ್‍ಡಿಎ 6 ಸ್ಥಾನಗಳನ್ನು ಪಡೆದಿವೆ.ಈ ಎರಡು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಶಕ್ತಿ ವರ್ಧನೆಯಾಗಿರುವುದು ಗಮನಾರ್ಹ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ