ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭಾರತೀಯ ಜನತಾ ಪಕ್ಷವು ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ನವರೇ ಉತ್ತರಿಸಿ ಎಂಬ ಅಭಿಯಾನದ ಮೂಲಕ ಅವರ ಅಕಾರದ ಹಪಹಪಿತನ ಬಹಿರಂಗ ಪಡಿಸಿದೆ.
ಮುಖ್ಯಮಂತ್ರಿಯಾಗಲು ನಿಮಗೆ ದಲಿತರು ಬೇಕಿತ್ತು. ಆದರೆ, ಕಾಂಗ್ರೆಸ್ ಅಕಾರಕ್ಕೇರಲು ಶ್ರಮಿಸಿದ ಪರಮೇಶ್ವರರನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕಿದಿರಿ. ಒಮ್ಮೆ ಸೋಲಿಸಿದಿರಿ, ಮತ್ತೊಮ್ಮೆ ಉಪಮುಖ್ಯಮಂತ್ರಿ ಪಟ್ಟ ಕಸಿದುಕೊಂಡಿರಿ. 2013ರಲ್ಲಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು ಮತ್ತು ಕಾಂಗ್ರೆಸ್ ಅಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿಯಾಗಬೇಕಿತ್ತು. ದಲಿತನೊಬ್ಬ ಮುಖ್ಯಮಂತ್ರಿಯಾಗಬಾರದು, ನಾನೇ ಸಿಎಂ ಆಗಬೇಕೆಂದು ಅವರನ್ನು ಸೋಲಿಸಿದಿರಿ. ಇದು ನ್ಯಾಯವೇ? ಎಂದು ಪ್ರಶ್ನಿಸಿದೆ.
ಮಜವಾದಿಯ ನಾಟಕೀಯ ದಲಿತ ಪ್ರೇಮ!
ನಿಮ್ಮ ತುಘಲಕ್ ದರ್ಬಾರಿನಲ್ಲಿ 350ಕ್ಕೂ ಹೆಚ್ಚು ದಲಿತರ ಕೊಲೆ, 800ಕ್ಕೂ ಅಕ ದಲಿತ ಮಹಿಳೆಯರ ಅತ್ಯಾಚಾರ, 9000ಕ್ಕೂ ಹೆಚ್ಚು ದಲಿತ ದೌರ್ಜನ್ಯ ಪ್ರಕರಣ ದಾಖಲಾದವು. ಅಲ್ಲದೆ ಪ್ರತಿ 4 ಗಂಟೆಗೆ ಒಬ್ಬ ದಲಿತನ ಮೇಲೆ ದೌರ್ಜನ್ಯ, ಪ್ರತಿ 5 ದಿನಕ್ಕೆ ಒಬ್ಬ ದಲಿತನ ಕೊಲೆ, ಇಷ್ಟೆಲ್ಲಾ ಆಗುತ್ತಿದ್ದವು. ನಿಮ್ಮದೇ ಪಕ್ಷದ ದಲಿತ ಶಾಸಕನ ಮನೆಗೆ ಮತಾಂಧರು ಬೆಂಕಿಯಿಟ್ಟರು. ಶಾಸಕನನ್ನು ರಕ್ಷಿಸುವ ಬದಲು ಗಲಭೆಯಲ್ಲಿ ಭಾಗಿಯಾದವರಿಗೆ ಅಮಾಯಕರೆಂದು ಪ್ರಮಾಣಪತ್ರ ನೀಡಿದಿರಿ. ಮತಾಂಧರ ಮೇಲೆ ಇರುವಷ್ಟು ಪ್ರೇಮ ದಲಿತರ ಮೇಲೇಕಿಲ್ಲ? ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಮಜವಾದಿಯಂತೆ ಕಾಲ ಕಳೆಯುತ್ತಿರುವ ನಿಮ್ಮ ದಲಿತ ಪ್ರೇಮ ಕೇವಲ ನಾಟಕವಲ್ಲವೇ? ದಲಿತರ ರಕ್ಷಣೆಗಿಂತ ನಿಮಗೆ ಟಿಪ್ಪು ಜಯಂತಿ ಆಚರಣೆ ಮುಖ್ಯವಾಯಿತಲ್ಲವೇ? ಎಂದು ಸರಣಿ ಟ್ವೀಟ್ಗಳ ಮೂಲಕ ತೀಕ್ಷ್ಣವಾಗಿ ತರಾಟೆ ತೆಗೆದುಕೊಂಡಿದೆ.