ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಚಿತ ಕೊರೋನಾ ಲಸಿಕೆಯ ಭರವಸೆ ನೀಡಿರುವುದು ಕಾನೂನು ಬದ್ಧವಾಗಿ ತಪ್ಪಾಗಲಾರದು ಎಂದು ಚುನಾವಣಾ ಆಯೋಗದ ಮೂವರು ಮಾಜಿ ಆಯುಕ್ತರು ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯ ಈ ನಡೆಯು ಕಾನೂನಾತ್ಮಕವಾಗಿ ತಪ್ಪಿಲ್ಲವಾದರೂ, ನೈತಿಕತೆಗೆ ಸಂಬಂಸಿದ್ದಾಗಿದೆ ಎಂದು 2010ರಿಂದ 2012ರ ನಡುವೆ ಆಯೋಗದ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಎಸ್.ವೈ. ಖುರೇಶಿ ತಿಳಿಸಿದ್ದಾರೆ.
ಯಾವುದೇ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡುವ ಭರವಸೆಯನ್ನು ಪೂರೈಸಲು ಬಜೆಟ್ ನಿಬಂಧನೆಗಳನ್ನು ಸಹ ಉಲ್ಲೇಖಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಪಡಿಸಿದೆ. ಪ್ರಣಾಳಿಕೆಯಲ್ಲಿ ಯಾವುದೇ ಭರವಸೆ ನೀಡುವ ಸಾಧ್ಯತೆಗಳಿರುವುದರಿಂದ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ ಎಂದು 2018ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಒ.ಪಿ. ರಾವತ್ ಹೇಳಿದ್ದಾರೆ.
ಇದೇ ವೇಳೆ ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆ ಬಿಡುಗಡೆಯ ವೇಳೆಯು ಸಹ ಮುಖ್ಯವಾಗಿರುತ್ತದೆ ಎಂದು ಆಯೋಗದ ಮತ್ತೋರ್ವ ಮಾಜಿ ಮುಖ್ಯ ಆಯುಕ್ತ ತಿಳಿಸಿದ್ದಾರೆ.