ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಕುರಿತು ವಾದ-ಪ್ರತಿವಾದಗಳನ್ನು ಅ.18ರ ಗಡುವಿನೊಳಗೆ ಪೂರ್ಣಗೊಳಿಸಿ, ಗಡುವು ಪೂರ್ಣಗೊಂಡರೆ ಒಂದು ದಿನವೂ ಕಾಲವಕಾಶ ನೀಡುವುದಿಲ್ಲ ಎಂದು ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳಿಗೆ ಸುಪ್ರೀಂಕೋರ್ಟ್ ಗುರುವಾರ ಸೂಚಿಸಿದೆ.
32ನೇ ದಿನವಾದ ಇಂದು ನ್ಯಾಯಾಲಯಕ್ಕೆ ಹಾಜರಾದ ಹಿಂದೂ ಹಾಗೂ ಮುಸ್ಲಿಂ ಪರ ವಕೀಲರು ಎಂದಿನಂತೆ ತಮ್ಮ ವಾದ ಮಂಡನೆ ಮಾಡಿದರು. ಅಯೋಧ್ಯೆಯಲ್ಲಿರುವ ವಿವಾದಿತ 2.77 ಎಕರೆ ಜಾಗದ ಮಾಲೀಕತ್ವದ ಕುರಿತು ವಾದ ಮಂಡನೆ ಮಾಡಿದ್ದಾರೆ.
ಅಯೋಧ್ಯೆ ಭೂ ವಿವಾದ ಕುರಿತ ಎಲ್ಲಾ ವಾದ ಹಾಗೂ ಪ್ರತಿವಾದಗಳನ್ನು ಅಕ್ಟೋಬರ್ 14ರೊಳಗಾಗಿ ಪೂರ್ಣಗೊಳಿಸಲು ನ್ಯಾಯಾಲಯ ನಿರ್ಧರಿಸಿದೆ ಎಂದು ಹೇಳಲಾಗುತ್ತಿದ್ದು, ಇನ್ನುಳಿದ ನಾಲ್ಕು ದಿನಗಳಲ್ಲಿ ಅಂತಿಮ ತೀರ್ಪು ನೀಡಲು ನ್ಯಾಯಾಲಯ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ನ್ಯಾಯಾಲಯಕ್ಕೆ ಹಾಜರಾದ ಸುನ್ನಿ ವಕ್ಫ್ ಮಂಡಳಿಯ ಪರ ವಕೀಲ ರಜೀವ್ ಧವನ್ ಅವರು, ವಾದ ಹಾಗೂ ಪ್ರತಿವಾದಗಳಿಗೆ ದಿನದಲ್ಲಿ 1 ಗಂಟೆ ಹೆಚ್ಚಾಗಿ ನೀಡುವಂತೆ ಹಾಗೂ ಶನಿವಾರ ಕೂಡ ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡರು.
ಈ ವೇಳೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಲಯ, ವಾದ ಹಾಗೂ ಪ್ರತಿವಾದ ಕೇಳಲು ಇನ್ನು 10 ದಿನಗಳು ಬಾಕಿಯಿವೆ. ಅ.18ರ ಬಳಿಕ ಒಂದು ದಿನ ಕೂಡ ವಾದ ಹಾಗೂ ಪ್ರತಿವಾದಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.