ಅಯೋಧ್ಯೆ ವಿಚಾರಣೆ ಅಂತ್ಯ; ಐವರು ನ್ಯಾಯಾಧೀಶರ ಇಂದಿನ ಚರ್ಚೆಯ ವಿಶೇಷ ಏನು?

ನವದೆಹಲಿ:ದೇಶಾದ್ಯಂತ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದ ಅಯೋಧ್ಯೆ ಭೂವಿವಾದದ ಪ್ರಕರಣ ಸುದೀರ್ಘ ವಿಚಾರಣೆ ನಂತರ ಬುಧವಾರ ಮುಕ್ತಾಯಗೊಂಡಿದ್ದು, ತೀರ್ಪನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಕಾಯ್ದಿರಿಸಿದೆ. ಆ ನಿಟ್ಟಿನಲ್ಲಿ ಗುರುವಾರ ಸಿಜೆಐ ನೇತೃತ್ವದ ಸಾಂವಿಧಾನಿಕ ಪೀಠದ ಐವರು ನ್ಯಾಯಾಧೀಶರು ಗುರುವಾರ ರಾಜಕೀಯವಾಗಿ ಸೂಕ್ಷ್ಮವಾಗಿರುವ ಪ್ರಕರಣದ ವಾದ, ಪ್ರತಿವಾದದ ಕುರಿತ ಅಭಿಪ್ರಾಯಗಳನ್ನು ಚರ್ಚಿಸಿ ಅಂತಿಮ ತೀರ್ಪಿನ ದಿನಾಂಕ ನಿಗದಿ ಬಗ್ಗೆ ಮಾತುಕತೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

ಅಯೋಧ್ಯೆ, ಬಾಬ್ರಿ ಮಸೀದಿ ಭೂವಿವಾದದ ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠದಲ್ಲಿ ಸಿಜೆಐ ರಂಜನ್ ಗೋಗೊಯಿ, ನ್ಯಾ.ಎಸ್ ಎ ಬೋಬ್ಡೆ, ಡಿವೈ ಚಂದ್ರಾಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಎ ನಝೀರ್ ಸೇರಿ ಐವರು 40 ದಿನಗಳ ಕಾಲ ನಡೆದ ವಿಚಾರಣೆ ಕುರಿತು ಇಡೀ ದಿನ ಚರ್ಚೆ ನಡೆಸಲಿದ್ದಾರೆ ಎಂದು ವರದಿ ವಿವರಿಸಿದೆ.

ಏತನ್ಮಧ್ಯೆ ಸುಪ್ರೀಂಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆ ಸಮಿತಿ ನೀಡಿರುವ ವರದಿಯ ಕುರಿತು ಈ ವೇಳೆ ಚರ್ಚೆ ನಡೆಯಲಿದೆ. ಅಂತಿಮ ದಿನದ ವಿಚಾರಣೆ ನಂತರ ಏನು ತೀರ್ಪನ್ನು ನಿರೀಕ್ಷೆ ಮಾಡಲಾಗುತ್ತಿದೆ ಎಂಬ ಬಗ್ಗೆ ಲಿಖಿತ ಹೇಳಿಕೆಯನ್ನು ಸಲ್ಲಿಸಲು ಹಿಂದೂ, ಮುಸ್ಲಿಂ ಪಕ್ಷಗಳಿಗೆ ಸಿಜೆಐ ರಂಜನ್ ಗೋಗೊಯಿ ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ.

ಅಯೋಧ್ಯೆಯ 2.27ಎಕರೆ ಜಾಗವನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಾಗೆ ಸೇರಿದಂತೆ ಮೂರು ಸಮಾನಂತರ ಭಾಗ ಮಾಡಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ 14 ಮೇಲ್ಮನವಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ಅಕ್ಟೋಬರ್ 16ರಂದು ಪೂರ್ಣಗೊಂಡಿದ್ದು, ಇನ್ನು ಅಂತಿಮ ತೀರ್ಪು ಘೋಷಣೆ ಮಾತ್ರ ಬಾಕಿ ಉಳಿದಿದೆ. ಸಿಜೆಐ ಗೋಗೊಯಿ ನವೆಂಬರ್ 17ರಂದು ನಿವೃತ್ತಿಯಾಗಲಿದ್ದು, ಅಷ್ಟರೊಳಗೆ ತೀರ್ಪು ಪ್ರಕಟಿಸಲಿದ್ದಾರೆ ಎಂದು ವರದಿ ತಿಳಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ