ಅಯೋಧ್ಯಾ ರಾಮ ಮಂದಿರ ವಿಚಾರ; ಧರ್ಮಾದೇಶ ಸಭೆಯಲ್ಲಿ ಕೇಂದ್ರಕ್ಕೆ ಸಂತರು ನೀಡಿದ ಎಚ್ಚರಿಕೆಯೇನು…?

ನವದೆಹಲಿ: ರಾಮ ಮಂದಿರ ನಿರ್ಮಾಣ ಆಗ್ರಹ ದೇಶಾದ್ಯಂತ ಪ್ರತಿಧ್ವನಿಸಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಆಂದೋಲನ ನಡೆಸುವುದಾಗಿ ಅಖಿಲಭಾರತ ಸಂತ ಸಮಿತಿಯು ಧರ್ಮಾದೇಶ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ.

ದೆಹಲಿಯಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತ ಸಂತ ಸಮಿತಿಯ ಧರ್ಮಾದೇಶ ಸಭೆಯಲ್ಲಿ 3000ಕ್ಕೂ ಅಧಿಕ ಸಂತರು ಭಾಗವಹಿಸಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಮಾಂದೋಲನಕ್ಕೆ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೇ ಡಿ.6ರರೊಳಗೆ ಮಂದಿರ ನಿರ್ವಿುಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಂತರು ಗಡುವು ನೀಡಿದ್ದಾರೆ.

ಸಭೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಡಿ.6ರ ರ ಬಳಿಕ ಮಮ್ದಿರ ನಿರ್ಮಾಣಕ್ಕೆ ದೆಹಲಿ, ಅಯೋಧ್ಯೆ, ಬೆಂಗಳೂರು ಮತ್ತು ನಾಗ್ಪುರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಲು ನಿರ್ಧರಿಸಲಾಗಿದೆ. ಈ ಮೂಲಕ ಸಮುದಾಯದ ಸಹನೆಯ ಕಟ್ಟೆ ಒಡೆಯುವುದರೊಳಗೆ ರಾಮ ಮಂದಿರ ನಿರ್ಮಾಣ ಬಿಕ್ಕಟ್ಟು ಬಗೆಹರಿದರೆ ಉತ್ತಮ ಎಂಬ ಎಚ್ಚರಿಕೆಯನ್ನೂ ಸಂತರು ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ.

ಸಭೆಯ ಕೊನೆಯ ದಿನ ಮಾತನಾಡಿದ ಜಗದ್ಗುರು ರಾಮಭದ್ರಾಚಾರ್ಯ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ತ್ರಿವಳಿ ತಲಾಕ್ ರದ್ದುಗೊಳಿಸಲು ಸುಗ್ರೀವಾಜ್ಞೆಗೆ ಮುಂದಾದ ಸರ್ಕಾರ ರಾಮ ಮಂದಿರ ವಿಚಾರದಲ್ಲಿ ಏಕೆ ಸುಗ್ರೀವಾಜ್ಞೆ ತರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ನಾಲ್ಕು ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಒಮ್ಮೆಯೂ ಅಯೋಧ್ಯೆಗೆ ಭೇಟಿ ಕೊಟ್ಟಿಲ್ಲ. ಭೇಟಿ ನೀಡಿದ್ದರೆ ನಮಗೆ ಸಮಾಧಾನವಾದರೂ ಆಗುತ್ತಿತ್ತು. ಈಗ ನಮ್ಮ ತಾಳ್ಮೆ ಮುಗಿಯುತ್ತಿದೆ. ಈಗಲಾದರೂ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ‘ನಿಮ್ಮ ಆಸೆ ಈಡೇರಬೇಕಾದರೆ, ದೀಪಾವಳಿಯಂದು ಶ್ರೀರಾಮನ ಹೆಸರಲ್ಲಿ ಒಂದು ದೀಪ ಹಚ್ಚಿ. ಶೀಘ್ರವೇ ಕನಸು ನನಸಾಗಲಿದೆ’ ಎಂದು ರಾಮಭಕ್ತರಿಗೆ ಕರೆ ನೀಡಿದರು.

ಅಲ್ಲದೇ ನಮಗೆ ನೈಜ ಬದ್ಧತೆ ಹಾಗೂ ಭಕ್ತಿ ಇದ್ದಲ್ಲಿ ರಾಮ ಮಂದಿರ ನಿರ್ಮಾಣ ಕನಸು ಸಾಕಾರಗೊಳ್ಳಲಿದೆ. ದೀಪಾವಳಿಯಿಂದ ನಾವು ಈ ಯೋಜನೆ ಚುರುಕುಗೊಳಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಅಂತಿಮವಾಗಿ ಸಭೆಯಲ್ಲಿ ರಾಮ ಮಂದಿರ ನಿರ್ವಣದ ಬಗ್ಗೆ ಸರ್ಕಾರದಿಂದ ಡಿ. 6ರೊಳಗೆ ನಿರ್ಣಾಯಕ ನಿರ್ಧಾರ ಹೊರಬೀಳಬೇಕು; ಸಂಧಾನ, ಮಾತುಕತೆ ಅಥವಾ ಯಾವುದರ ಮೂಲಕ ಆದರೂ ಸರಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆಗಲೇಬೇಕು ಹಾಗೂ ಅದು ಸಾಧ್ಯವಾಗದೆ ಇದ್ದಲ್ಲಿ ಸುಗ್ರೀವಾಜ್ಞೆ ತಂದಾದರೂ ಮಂದಿರ ಕನಸನ್ನು ನನಸು ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ.

ಒಟ್ಟಾರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಬಗ್ಗೆ ದೇಶಾದ್ಯಂತ ಪಕ್ಷಾತೀತ ಬೆಂಬಲ ವ್ಯಕ್ತವಾಗುತ್ತಿದ್ದು, ಸಂತರ ಸಮಿತಿ ಎಚ್ಚರಿಕೆ ಹಾಗೂ ಗಡುವಿನ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Ayodhya,Rama Mandir,Dharmaadesh sabha,Akhil Bhartiya Sant Samiti

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ