370 ವಿಧಿ ರದ್ದತಿಗೂ ಮುನ್ನ ಜಮ್ಮು-ಕಾಶ್ಮೀರ ಕಗ್ಗಂಟಾಗಿ ಪರಿಣಮಿಸಿತ್ತು: ಎಸ್.ಜೈಶಂಕರ್

ನ್ಯೂಯಾರ್ಕ್: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರ ಕಗ್ಗಂಟಾಗಿ ಪರಿಣಮಿಸಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಬುಧವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದಕ್ಕೂ ರಾಜ್ಯಕ್ಕೆ ಸಾಕಷ್ಟು ಭದ್ರತೆಯನ್ನು ನೀಡಲಾಗಿತ್ತು. ಎಲ್ಲೆಡೆ ನಿರ್ಬಂಧವನ್ನು ಹೇರಲಾಗಿತ್ತು. ಯಾವುದೇ ಪ್ರಾಣಹಾನಿಗಳಾಗಬಾರದು ಎಂಬ ಕಾರಣಕ್ಕೆ ನಿರ್ಬಂಧ ಹೈರಲಾಗಿತ್ತು. ಜನರ ರಕ್ಷಣೆಯೇ ಸರ್ಕಾರ ಪ್ರಮುಖ ಉದ್ದೇಶವಾಗಿತ್ತು. 2016ರಲ್ಲಿ ಬುರ್ಹಾನ್ ವಾನಿಯನ್ನು ಹತ್ಯೆ ಮಾಡಿದ ಬಳಿಕ ಹಿಂಸಾಚಾರದಲ್ಲಿ ಸಾಕಷ್ಟು ಜನರು ಸಾವನ್ನಪ್ಪಿದ್ದರು. ಇದರ ಅನುಭವದಿಂದಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿ, ವಿಶೇಷ ಸ್ಥಾನಮಾನವನ್ನು ರದ್ದು ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ 30 ವರ್ಷಗಳಲ್ಲಿ ಈವರೆಗೂ 42,000 ಜನರು ಸಾವನ್ನಪ್ಪಿದ್ದಾರೆ. ಕಾಶ್ಮೀರದಲ್ಲಿ ಬೆದರಿಕೆ ದೊಡ್ಡಮಟ್ಟಕ್ಕೇರಿದೆ.

ಶ್ರೀನಗರ ಬೀದಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಯಿತು. ಪ್ರತ್ಯೇಕತಾವಾದಿಗಳ ವಿರುದ್ಧ ಬರೆಯುತ್ತಿದ್ದ ಪತ್ರಕರ್ತರ ಕತ್ತು ಸೀಳಿ ಹತ್ಯೆ ಮಾಡಲಾಗುತ್ತಿತ್ತು. ಮನೆಗಳಿಗೆ ಹಿಂತಿರುಗುತ್ತಿದ್ದ ಸೇನಾ ಸಿಬ್ಬಂದಿಗಳನ್ನು ಅಪಹರಣ ಮಾಡಿ, ಹತ್ಯೆ ಮಾಡಲಾಗುತ್ತಿತ್ತು. ಆಗಸ್ಟ್ 5ಕ್ಕೂ ಮುನ್ನ ಕಾಶ್ಮೀರ ದೊಡ್ಡ ಕಗ್ಗಂಟಾಗಿ ಪರಿಣಮಿಸಿತ್ತು. ಆಗಸ್ಟ್ 5ರ ಬಳಿಕ ಕಾಶ್ಮೀರದ ಸಮಸ್ಯೆಗಳು ದೂರಾಗಿವೆ. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿನ ಸ್ಥಿತಿ ಸಹಜದತ್ತ ತಲುಪಿದೆ. ನಿರ್ಬಂಧಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಆರ್ಥಿಕ ಚಟುವಟಿಕೆಗಳಿ ಎಂದಿನಂತೆ ನಡೆಯುತ್ತಿವೆ.

ಸ್ವಾತಂತ್ರ್ಯ ಬಂದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ತಾತ್ಕಾಲಿಕವಾಗಿ ಅಷ್ಟೇ ವಿಶೇಷ ಸ್ಥಾನಮಾನವನ್ನು ನೀಡಲಾಗಿತ್ತು. ಸ್ವಾತಂತ್ರ್ಯ ಬಂದರೂ ಕಾಶ್ಮೀರ ಮಾತ್ರ ಅಂದಿನಿಂದ 370 ರದ್ದಾಗುವವರೆಗೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಲೇ ಇತ್ತು. ಭಾರತ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ದೇಶದ ಗಡಿ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಅಷ್ಟಾಗಿ ಇರಲಿಲ್ಲ. ಉದ್ಯೋಗಾವಕಾಶಗಳೂ ಕಡಿಮೆಯಿತ್ತು. ಗಡಿಯಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ದೇಶದ 100 ಪ್ರಮುಖ ಪ್ರಗತಿಪರ ಕಾನೂನುಗಳು ಕಾಶ್ಮೀರಕ್ಕೆ ಅನುಗುಣವಾಗುತ್ತಿರಲಿಲ್ಲ. ಪ್ರತ್ಯೇಕತಾವಾದಿಗಳ ರಾಜಕೀಯ ಪಕ್ಷಗಳು ನೇರವಾಗಿಯೇ ಪಾಕಿಸ್ತಾನ ಉಗ್ರ ಸಂಘಟನೆಗಳೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿದ್ದವು.

ಸಾಕಷ್ಟು ಬಾರಿ ಕಾಶ್ಮೀರ ವಿಚಾರ ನಮ್ಮ ಆಂತರಿಕ ವಿಚಾರವೆಂದೂ ಭಾರತ ತಿಳಿಸಿತ್ತು. ಭಾರತದ ನಿಲುವಿಗೆ ಸಾಕಷ್ಟು ದೇಶಗಳೂ ಬೆಂಬಲ ನೀಡಿದ್ದವು. ವಿಶ್ವದ ಸಾರ್ಕ್ ಮತ್ತು ಅರಬ್ ದೇಶಗಳೂ ನಮಗೆ ಬೆಂಬಲ ನೀಡಿತ್ತು. ಆದರೆ, ಪಾಕಿಸ್ತಾನ ಮಾತ್ರ ಇದಕ್ಕೆ ಖಂಡನೆ ವ್ಯಕ್ತಪಡಿಸಿತ್ತು. ಭಾರತದೊಂದಿಗಿನ ಸಂಬಂಧವನ್ನು ಕೆಳಮಟ್ಟಕ್ಕಿಳಿಸಿತ್ತು. ಅಂದಿನಿಂದ ಪಾಕಿಸ್ತಾನ ಭಾರತ ವಿರೋಧಿ ವಾಕ್ಚಾತುರ್ಯವನ್ನು ನಡೆಸುತ್ತಿದೆ. ಕಾಶ್ಮೀರ ಸಮಸ್ಯೆಯನ್ನು ಅಂತರಾಷ್ಟ್ರೀಯ ವಿಚಾರವಾಗಿಸಲು ಪ್ರಯತ್ನ ನಡೆಸುತ್ತಲೇ ಇದೆ. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ