ಬಿಜೆಪಿ ವಿಶ್ವಾಸಮತ; ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕಾಂಗ ಸಭೆ; ತಟಸ್ಥವಾಗಿರಲು ತೀರ್ಮಾನ!

ಬೆಂಗಳೂರು; ಇಂದು ವಿಧಾನ ಮಂಡಲ ಅಧಿವೇಶನದಲ್ಲಿ ಬಿಜೆಪಿ ವಿಶ್ವಾಸಮತ ಯಾಚನೆ ಹಿನ್ನೆಲೆ ಇಂದು ಬೆಳಗ್ಗೆ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿದ್ದು, ವಿಶ್ವಾಸಮತ ಯಾಚನೆ ವೇಳೆ ತಟಸ್ಥವಾಗಿರಲು ತೀರ್ಮಾನಿಸಲಾಗಿದೆ.

ಈ ಹಿಂದೆ ಜೆಡಿಎಸ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ನಿರಾಕರಿಸಿರುವ ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಕುರಿತು ಮತ್ತೆ ಇಂದು ಬೆಳಗ್ಗೆ ತಮ್ಮ ಶಾಸಕರ ಜೊತೆ ಚರ್ಚೆ ನಡೆಸಿರುವ ಅವರು, “ಸದನದಲ್ಲಿ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತು ಕೆಲಸ ಮಾಡೋಣ, ವಿಶ್ವಾಸ ಮತದ ಸಂಧರ್ಭದಲ್ಲಿ ತಟಸ್ಥ ವಾಗಿರುವ ಕುರಿತು ತೀರ್ಮಾನಿಸಿದ್ದಾರೆ” ಎಂದು ತಿಳಿದುಬಂದಿದೆ.

ಸದನಕ್ಕೂ ಮುನ್ನ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರ ಜೊತೆ ಚರ್ಚೆ ನಡೆಸಿದ ನಂತರ ಕುಮಾರಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ. ದೇವೇಗೌಡರನ್ನು ಭೇಟಿ ಮಾಡಿ, ಇಂದಿನಿಂದ ಸದನದಲ್ಲಿ ತಾನು ಏನು ಮಾಡಬೇಕು? ವಿರೋಧ ಪಕ್ಷವಾದ ಕಾಂಗ್ರೆಸ್ ಜೊತೆಯಲ್ಲಿ ಇದ್ದು ಬಿಜೆಪಿ ವಿರುದ್ಧ ಹೋರಾಟ ಮಾಡಬೇಕೆ ? ಅಥವಾ ಸ್ವತಂತ್ರ್ಯವಾಗಿ ಹೋರಾಟ ರೂಪಿಸಬೇಕೆ? ವಿರೋಧ ಪಕ್ಷವಾಗಿ ಜೆಡಿಎಸ್​ ನಿಲುವು ಏನು? ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಸಂಘಟಿಸಬೇಕು? ಎಂದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಅಲ್ಲದೆ ಬಿಜೆಪಿಯ ಕೆಲ ನಿರ್ಧಾರಗಳನ್ನು ಖಂಡಿಸಿ ಜನಪರ ನಿಲ್ಲುವ ಕುರಿತು ಇಬ್ಬರೂ ಚರ್ಚೆ ನಡೆಸಲಿದ್ದಾರೆ. ತದನಂತರ ಮಾಜಿ ಸಿಎಂ ಕುಮಾರಸ್ವಾಮಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ