ಅಹಿಂದ ಸಮುದಾಯ ಓಲೈಕೆಗೆ ಮುಂದಾದ ದೇವೇಗೌಡರು; ಈ ಇಬ್ಬರಿಗೆ ಜೆಡಿಎಸ್​ ರಾಜ್ಯಾಧ್ಯಕ್ಷ ಪಟ್ಟ ಸಾಧ್ಯತೆ!

ಬೆಂಗಳೂರುಲೋಕಸಭಾ ಸೋಲಿನ ಬಳಿಕ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ಒಳಗೆ ಸಾಕಷ್ಟು ಬದಲಾವಣೆಯ ಗಾಳಿ ಬೀಸಿದೆ. ಅದರಲ್ಲೂ ಮುಖ್ಯವಾಗಿ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​. ವಿಶ್ವನಾಥ್​ ತಮ್ಮ ಪಕ್ಷದೊಳಗಿನ ಭಿನ್ನಾಭಿಪ್ರಾಯಕ್ಕೆ ಬೇಸತ್ತು ತಮ್ಮ ಸ್ಥಾನವನ್ನೇ ತ್ಯಜಿಸಿದ್ದರು. ಈ ಬೆಳವಣಿಗೆ ಜೆಡಿಎಸ್ ಪಕ್ಷಕ್ಕೆ ಆಘಾತ ನೀಡಿದ್ದು ಸುಳ್ಳಲ್ಲ! ಅಲ್ಲದೆ ಜೆಡಿಎಸ್ ಪಕ್ಷದ ಮುಂದಿನ ಅಧಿಕಾರದ ಚುಕ್ಕಾಣಿ ಯಾರಿಗೆ? ಪಕ್ಷದ ರಾಷ್ಟ್ರಾಧ್ಯಕ್ಷರ ನಡೆ ಏನು? ಹೀಗೆ ನಾನಾ ಪ್ರಶ್ನೆಗಳು ಉದ್ಭವವಾಗಿತ್ತು. ಈ ಎಲ್ಲಾ ಪ್ರಶ್ನೆಗೆ ಉತ್ತರ ಹುಡುಕಲು ಸ್ವತಃ ಇದೀಗ ದೊಡ್ಡ ಗೌಡರೇ ಮುಂದಾಗಿದ್ದಾರೆ.

ಲೋಕಸಭಾ ಸೋಲಿನ ನಂತರ ಕುಂದಿರುವಂತೆ ಕಂಡಿರುವ ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಲು, ಪಕ್ಷವನ್ನು ಮತ್ತೆ ಬೇರು ಮಟ್ಟದಿಂದ ಕಟ್ಟಲು ಮುಂದಾಗಿರುವ ಮಾಜಿ ಪ್ರಧಾನಿ ದೇವೇಗೌಡರು ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರಿಗೆ ಪಕ್ಷದ ಅಧಿಕಾರದ ಪಟ್ಟ ಕಟ್ಟಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಪೈಕಿ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರು ಮಾಜಿ ಶಾಸಕ ದೇವೇಗೌಡರ ಮಾನಸ ಪುತ್ರ ಮಧು ಬಂಗಾರಪ್ಪ.

ಮಧು ಬಂಗಾರಪ್ಪನಿಗೆ ರಾಜ್ಯಾಧ್ಯಕ್ಷ ಪಟ್ಟ ಸಾಧ್ಯತೆ?
ಹೆಚ್​. ವಿಶ್ವನಾಥ್​ ಜೆಡಿಎಸ್​ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಆ ಹುದ್ದೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಸರು ಕೇಳಿ ಬಂದಿತ್ತು. ಆದರೆ, ದೇವೇಗೌಡರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಅವರು ಈ ಹುದ್ದೆಗೆ ಸೂಕ್ತ ವ್ಯಕ್ತಿಗಳ ಹುಡುಕಾಟದಲ್ಲಿದ್ದರು, ಕೊನೆಗೂ ಅವರ ಹುಡುಕಾಟ ಮುಕ್ತಾಯವಾಗಿದ್ದು, ಎಲ್ಲವೂ ಅಂದು ಕೊಂಡತೆ ನಡೆದರೆ ಇತ್ತೀಚೆಗೆ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಲಿದ್ದಾರೆ.

ಈಡಿಗ ಸಮಾಜಕ್ಕೆ ಸೇರಿದ ಮಧುಬಂಗಾರಪ್ಪ ಅವರಿಗೆ ಪಟ್ಟ ಕಟ್ಟುವ ಮೂಲಕ ಹಿಂದುಳಿದ ಸಮಾಜದ ವ್ಯಕ್ತಿಗೆ ಆದ್ಯತೆ ನೀಡಿದಂತಾಗುತ್ತದೆ. ಅಲ್ಲದೆ ಶಿವಮೊಗ್ಗದಲ್ಲಿ ಅಧಿಕಾರ ಪಾರುಪತ್ಯ ಸಾಧಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ವಿರುದ್ಧ ಬಂಗಾರಪ್ಪ ಕುಟುಂಬವನ್ನು ಮತ್ತಷ್ಟು ಪ್ರಬಲವಾಗಿ ಬೆಳಸುವ ಗುರಿಯನ್ನೂ ಸಾಧಿಸಿದಂತಾಗುತ್ತದೆ. ಆ ಮೂಲಕ ಶಿವಮೊಗ್ಗದ ಅಧಿಕಾರವನ್ನು ಒಂದಲ್ಲಾ ಒಂದು ದಿನ ಹಿಡಿಯುವ ಮಹತ್ವಾಕಾಂಕ್ಷೆ ದೊಡ್ಡ ಗೌಡರದು.

ಇದೇ ಕಾರಣಕ್ಕೆ ಕಳೆದ ಮೂರು ಚುನಾವಣೆಯಲ್ಲೂ ಸೋಲನುಭವಿಸಿದರೂ ಸಹ ಮತ್ತೆ ಮಧು ಬಂಗಾರಪ್ಪನಿಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೀಡಲು ದೇವೇಗೌಡರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಇನ್ನೊಬ್ಬ ನಿಷ್ಠಾವಂತ ಕಾರ್ಯಕರ್ತ ಎನಿಸಿಕೊಂಡ ಎಂಎಲ್​ಸಿ ಬಿ.ಎಂ. ಫಾರೂಕ್​ ಹೆಸರು ಕೂಡ ಜೆಡಿಸ್​ ಪಾಳೆಯದಲ್ಲಿ ಕೇಳಿ ಬಂದಿದೆ. ಈಗಾಗಲೇ ಮುಸ್ಲಿಂ ಸಮುದಾಯಕ್ಕೆ ಜೆಡಿಎಸ್​ ಪ್ರಾತಿನಿಧ್ಯ ನೀಡುತ್ತಿಲ್ಲ ಎಂಬ ಕೂಗಿದೆ. ಈ ಹಿನ್ನೆಲೆಯಲ್ಲಿ ಫಾರೂಕ್​ಗೆ ಈ ಸ್ಥಾನ ನೀಡಿದರೆ ಅಲ್ಪ ಸಂಖ್ಯಾತರ ಓಲೈಕೆ ಮಾಡಿದಂತೆ ಆಗುತ್ತದೆ. ಅಲ್ಲದೇ ಫಾರೂಕ್​ ಶ್ರೀಮಂತ ರಾಜಕಾರಣಿಯಾಗಿದ್ದು ಪಕ್ಷ ಕಟ್ಟಲು ಸಹಾಯವಾಗುತ್ತದೆ ಎಂಬ ಆಲೋಚನೆ ದೇವೇಗೌಡರಿಗೆ ಇದೆ ಎನ್ನಲಾಗಿದೆ.

ಮೈತ್ರಿ ನಾಯಕ ಸಿದ್ದರಾಮಯ್ಯ ರಾಜ್ಯ ರಾಜಕೀಯದಲ್ಲಿ ಈಗಾಗಲೇ ತಾವೊಬ್ಬ ಅಹಿಂದ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಈ ಸಮಾಜದ ಮತಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಸಲುವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಅಹಿಂದ ಯಾತ್ರೆ ನಡೆಸಲು ಸಹ ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ದೇವೇಗೌಡರು ಹಿಂದುಳಿದ ಈಡಿಗ ಸಮುದಾಯದ ನಾಯಕ ಮಧು ಬಂಗಾರಪ್ಪ ಹಾಗೂ ಅಲ್ಪಸಂಖ್ಯಾತ ನಾಯಕ ಫಾರೂಕ್​ ಅವರಿಗೆ ಸ್ಥಾನ ನೀಡುವ ಮೂಲಕ ಜೆಡಿಎಸ್​ ಪಕ್ಷ ಕೇವಲ ಗೌಡರ ಹಾಗೂ ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಸಾರಲು ಭರ್ಜರಿ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಒಂದು ವೇಳೆ ಈ ಇಬ್ಬರು ಈ ಸ್ಥಾನವಹಿಸಿಕೊಳ್ಳದಿದ್ದರೆ, ದೇವೇಗೌಡರು ಉತ್ತರ ಕರ್ನಾಟಕದ ಲಿಂಗಾಯತರಿಗೆ ಈ ಸ್ಥಾನವನ್ನು ನೀಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ