ಎಚ್.ಡಿ.ಕುಮಾರಸ್ವಾಮಿ ಆಡಳಿತದ ಬಗ್ಗೆ ಚಾರ್ಜ್‍ಶೀಟ್ ಬಿಡುಗಡೆ ಮಾಡಲು ಸಾಧ್ಯವಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು, ಮಾ.14- ಬಿಜೆಪಿ-ಕಾಂಗ್ರೆಸ್ ಪರಸ್ಪರ ಚಾರ್ಜ್‍ಶೀಟ್ ಬಿಡುಗಡೆ ಮಾಡಿದ್ದು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 20 ತಿಂಗಳ ಕಾಲ ನಡೆಸಿದ ಆಡಳಿತದ ಬಗ್ಗೆ ಚಾರ್ಜ್‍ಶೀಟ್ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

ನಗರದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ 20 ತಿಂಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ. ಮತ್ತೆ ಅದೇ ರೀತಿ ಆಡಳಿತ ನಡೆಸಲು ಬಹುಮತ ಬೇಕಾಗಿದೆ. ಪಟ್ಟಣದ ಬಡವರಿಗೂ ಅಕ್ಕಿ, ಗೋಧಿ ನೀಡಲು ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತರಲಾಗಿತ್ತು. ಅದನ್ನೇ ಈಗ ಅನ್ನಭಾಗ್ಯ ಎನ್ನುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲ್ಲ ಎಂದರು.

ಕುಮಾರಸ್ವಾಮಿ ಸಂಪುಟ ಸಭೆಯ ಮುಂದೆ ನೈಸ್ ಸಂಸ್ಥೆ ವಿಚಾರವನ್ನು ಚರ್ಚೆಗೆ ತಂದಾಗ ಬಿಜೆಪಿ ಬೆಂಬಲ ಕೊಟ್ಟಿಲ್ಲ. ಒಂದು ವೇಳೆ ಬೆಂಬಲ ಕೊಟ್ಟಿದ್ದರೆ ಅಂದೇ ನೈಸ್ ಸಂಸ್ಥೆಯಿಂದ ಹೆಚ್ಚುವರಿ ಭೂಮಿಯನ್ನು ವಾಪಸ್ ಪಡೆಯಬಹುದಿತ್ತು ಎಂದರು.

ಬಿಎಂಐಸಿ ಯೋಜನೆಯನ್ನೇ ಸರ್ಕಾರದ ವಶಕ್ಕೆ ಪಡೆಯಲು ಕುಮಾರಸ್ವಾಮಿ ಮುಂದಾಗಿದ್ದರು. ಇದಾವುದಕ್ಕೂ ಬಿಜೆಪಿ ಬೆಂಬಲ ಕೊಟ್ಟಿಲ್ಲ. ಈಗ ಬಿಬಿಎಂಪಿಯಲ್ಲಿ ಪದ್ಮನಾಭರೆಡ್ಡಿ ಅವರು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಬೆಂಗಳೂರು ನಾಗರಿಕರು ಪ್ರಬುದ್ಧರಾಗಿದ್ದು, ರಾಜ್ಯದ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 2007ರಲ್ಲಿ ಕಾವೇರಿ ನ್ಯಾಯಾಧಿಕರಣದಿಂದ ರಾಜ್ಯಕ್ಕೆ ವ್ಯತಿರಿಕ್ತ ತೀರ್ಪು ಬಂದಾಗ ಹೋರಾಟ ಮಾಡಿದ್ದೆ. ಸುಪ್ರೀಂಕೊರ್ಟ್‍ನಲ್ಲಿ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತೀರ್ಪು ಬಂದಾಗ ಮುಖ್ಯಮಂತ್ರಿ ಹಾಗೂ ಸಚಿವರು ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ. ಈ ತೀರ್ಪು ಯಾರಿಂದ, ಹೇಗೆ ಬಂತು ಎಂದು ಹೇಳಲಿಲ್ಲ ಎಂದು ವಿಷಾದಿಸಿದರು.

2011ರ ಜನಗಣತಿಗೆ ಅನುಗುಣವಾಗಿ ಬೆಂಗಳೂರಿನಲ್ಲಿ 89 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಹಂಚಿಕೆ ಮಾಡಲಾಗಿದೆ. ಈಗ ಬೆಂಗಳೂರಿನಲ್ಲಿ 1 ಕೋಟಿ 20 ಲಕ್ಷಕ್ಕಿಂತ ಹೆಚ್ಚು ಜನರಿದ್ದಾರೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಬೆಂಗಳೂರಿಗೆ ಕುಡಿಯಲು ಹಂಚಿಕೆ ಮಾಡಿರುವ ನೀರು ಯಾವುದಕ್ಕೂ ಸಾಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ