ಬೆಂಗಳೂರು: ನನ್ನ ತಂದೆಯ ನಿರ್ಧಾರಕ್ಕೆ ನಾನು ಬದ್ಧಳಾಗಿದ್ದೇನೆ ಎಂದು ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಅವರು ತಿಳಿಸಿದ್ದಾರೆ.
ನಾನು ಕಾಂಗ್ರೆಸ್ ಶಾಸಕಾಂಗ ಸಭೆ(ಸಿಎಲ್ಪಿ)ಯಲ್ಲಿ ಭಾಗವಹಿಸುತ್ತಿದ್ದೇನೆ. ಅಪ್ಪ ಏನೂ ಮಾಡಿದರೂ ನಾನು ಅವರಿಗೆ ಬೆಂಬಲ ನೀಡುತ್ತೇನೆ. ಅಪ್ಪ 45 ವರ್ಷದಿಂದ ಪಕ್ಷ ಕಟ್ಟಿದ್ದಾರೆ ಹಾಗೂ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರಿಗೆ ಯಾವುದು ಸೂಕ್ತ ಎಂದು ಅನಿಸುತ್ತೋ ಅದನ್ನು ಅವರು ಮಾಡಲಿ. ನಾನು ಅವರಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.
ನಾನು ರಾಜೀನಾಮೆ ನೀಡುವುದರ ಬಗ್ಗೆ ಯೋಚನೆ ಮಾಡಿಲ್ಲ. ತಂದೆ ಹಾಗೂ ಬೆಂಬಲಿಗರು ಏನೂ ನಿರ್ಧಾರ ಮಾಡುತ್ತಾರೋ ಅವರ ನಿರ್ಧಾರಕ್ಕೆ ನಾನು ಬದ್ಧಳಾಗಿರುತ್ತೇನೆ. ನಾನು ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದರಿಂದ ದೆಹಲಿಗೆ ಹೋಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ರಾಜೀನಾಮೆ ನೀಡುವುದರ ಬಗ್ಗೆ ಯೋಚನೆ ಮಾಡಿಲ್ಲ. ಆದರೆ ರಾಜೀನಾಮೆ ನೀಡಬೇಡಿ ಎಂದು ಕಾಂಗ್ರೆಸ್ ನಾಯಕರು ಕೇಳಿಕೊಂಡಿದ್ದಾರೆ. ನನ್ನ ತಂದೆ ಹಾಗೂ ಬೆಂಬಲಿಗರು ಏನು ಹೇಳುತ್ತಾರೋ ಹಾಗೆ ಕೇಳುತ್ತೇನೆ ಎಂದರು.
ರಾಜಕೀಯ ಬೆಳವಣಿಗೆಯಿಂದ ನನಗೆ ತುಂಬಾ ಬೇಸರವಾಗಿದೆ. ನನ್ನ ತಂದೆ ಪ್ರಮಾಣಿಕತೆಯಿಂದ ದುಡಿದುಕೊಂಡು ಬಂದಿದ್ದಾರೆ. ತಂದೆ 1973ರಿಂದ ಯೂತ್ ಕಾಂಗ್ರೆಸ್ ಪಕ್ಷ ಕಟ್ಟಿಕೊಂಡು ಬಂದವರು. ಅಂತವರು ಈ ರೀತಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರೆ ಅವರಿಗೆ ಎಷ್ಟು ನೋವಾಗಿರಬಹುದು. ಇಡೀ ಜೀವನದಲ್ಲಿ ನನ್ನ ತಂದೆ ಇಷ್ಟು ಬೇಸರ ಮಾಡಿಕೊಂಡಿರುವುದು ನಾನು ನೋಡಿಲ್ಲ. ನನಗೆ ಹಾಗೂ ನನ್ನ ತಾಯಿಗೂ ಬೇಸರವಾಗಿದೆ ಎಂದು ಸೌಮ್ಯ ರೆಡ್ಡಿ ಹೇಳಿದರು.