ಬೆಂಗಳೂರು, ಜೂ.7: ಹತ್ತು ವರ್ಷಗಳ ಹಿಂದೆ ಕೇವಲ ಗುತ್ತಿಗೆ ಆಧಾರದ ಮೇಲೆ ಜಿಂದಾಲ್ ಸ್ಟೀಲ್ ಕಂಪೆನಿಗೆ ಜಮೀನು ಗುತ್ತಿಗೆ ನೀಡಲಾಗಿತ್ತು. ಆದರೆ ಈಗ ಯಾವುದೇ ಮಾನದಂಡ ಅನುಸರಿಸದೆ ಭಾರಿ ಬೆಲೆ ಬಾಳುವ 3667 ಎಕರೆ ಜಮೀನನ್ನು ಕಂಪೆನಿಗೆ ಅತ್ಯಂತ ಕಡಿಮೆ ದರದಲ್ಲಿ ಹಸ್ತಾಂತರಿಸುವ ರಾಜ್ಯ ಸರ್ಕಾರದ ತೀರ್ಮಾನದ ಹಿಂದೆ ಭ್ರಷ್ಟಾಚಾರದ ಸೂಚನೆಗಳಿವೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಮೈತ್ರಿ ಸರ್ಕಾರದ ಹಗರಣಗಳ ವಿರುದ್ಧ ವಾಗ್ದಾಳಿ ನಡೆಸಿದರು. ಜಿಂದಾಲ್ ಸಂಸ್ಥೆಗೆ ಸಂಬಂಧಿಸಿದ ಜಮೀನಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಹಗರಣಗಳ ಬಗ್ಗೆ ತನಿಖೆಗೆ ಆಗ್ರಹಿಸಿದರು.
ಸಾವಿರಾರು ಕೋಟಿ ಬೆಲೆ ಬಾಳುವ ಜಮೀನನ್ನು ಉಳಿಸಿ ರಾಜ್ಯಕ್ಕಾಗುವ ನಷ್ಟವನ್ನು ತಪ್ಪಿಸಬೇಕಾದ ಜವಾಬ್ದಾರಿ ವಿರೋಧಪಕ್ಷವಾದ ಬಿಜೆಪಿ ಮೇಲಿದ್ದು ಈ ಉದ್ದೇಶದಿಂದಲೇ ರಾಜ್ಯಸರ್ಕಾರದ ತೀರ್ಮಾನ ಖಂಡಿಸಿ ಜೂ.13 ರಂದು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಗಣಿ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೊಮ್ಮೆ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದ ಸಿದ್ಧರಾಮಯ್ಯ ಈಗ ಮೌನವಾಗಿರುವುದೇಕೆ? ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಿಂದಾಲ್ ವಿದ್ಯಮಾನ ತಮಗೆ ಸಂಬಂಧಿಸಿದ್ದೇ ಅಲ್ಲ ಎನ್ನುವಂತೆ ಗಾಢ ಮೌನಕ್ಕೆ ಶರಣಾಗಿರುವುದೇಕೆ? ಎಂದು ಪ್ರಶ್ನಿಸಿದರು.
ಜಿಂದಾಲ್ ಸಂಸ್ಥೆಯು ನೂರಾರು ಕೋಟಿ ರೂಪಾಯಿಗಳನ್ನು ಮೈಸೂರು ಮಿನರಲ್ಸ್ ಕಂಪೆನಿಗೆ ಬಾಕಿ ಉಳಿಸಿಕೊಂಡಿದ್ದರೂ ಶುದ್ಧ ಕ್ರಯಪತ್ರ ನೀಡುವ ತೀರ್ಮಾನ ಕೈಗೊಳ್ಳುವಾಗ ಈ ಅಂಶವನ್ನು ಪರಿಗಣಿಸದಿರುವುದು ರಾಜ್ಯಸರ್ಕಾರದ ಸಂಚನ್ನು ಬಯಲು ಮಾಡಿದೆ, ಡಿ.ಕೆ. ಶಿವಕುಮಾರ್ ಅವರು ಬಳ್ಳಾರಿ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವುದರ ಹಿಂದಿನ ತಂತ್ರಗಾರಿಕೆ ಜಿಂದಾಲ್ ವಿದ್ಯಮಾನದಿಂದ ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ರಾಜ್ಯಸರ್ಕಾರದ ಈ ತೀರ್ಮಾನವನ್ನು ಅವರದೇ ಪಕ್ಷದ ನಾಯಕರು ವಿರೋಧಿಸಿದ್ದಾರೆ. ಶ್ರೀ ಹೆಚ್.ಕೆ.ಪಾಟೀಲ್ ಈ ಕುರಿತಾಗಿ ಸುಧೀರ್ಘ ಪತ್ರವನ್ನು ಬರೆದಿದ್ದು, ಜೆ.ಡಿ.ಎಸ್ ರಾಜ್ಯಾಧ್ಯಕ್ಷರಾದ ಹೆಚ್.ವಿಶ್ವನಾಥ್ ಕೂಡ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಹಿರೇಮನಿ, ಕು.ಭಾರತಿ ಮುಗ್ದಂ, ಬಿಜೆಪಿ ಮುಖಂಡ ಶ್ರೀ ಛಲವಾದಿ ನಾರಾಯಣಸ್ವಾಮಿ, ಮಾಧ್ಯಮ ಸಂಚಾಲಕ ಶ್ರೀ ಎಸ್.ಶಾಂತಾರಾಮ್, ಸಹ ಸಂಚಾಲಕ ಶ್ರೀ ಶ್ರೀನಾಥ್ ಶ್ವೇತಾದ್ರಿ ಮುಂತಾದವರು ಉಪಸ್ಥಿತರಿದ್ದರು.