ಯಾದಗಿರಿ ಬ್ಯಾಂಕ್​ ಪ್ರಕರಣ; ತಪ್ಪಾಗಿರುವುದು ಬ್ಯಾಂಕ್​ ಸಿಬ್ಬಂದಿಯಿಂದ, ಸರ್ಕಾರದಿಂದಲ್ಲ; ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರುರೈತರ ಖಾತೆಗೆ ಜಮೆ ಆಗಿರುವ ಸಾಲ ಮನ್ನಾ ಹಣ ವಾಪಸ್ಸಾಗಿರುವುದು  ಬ್ಯಾಂಕ್ ಸಿಬ್ಬಂದಿಯ ತಪ್ಪಿನಿಂದ ಆಗಿರುವುದು ಎಂದು ಬ್ಯಾಂಕಿನವರೇ ಹೇಳಿದ್ದಾರೆ. ಇದರ ಬಗ್ಗೆ ತಿಳಿಯದ ಮಾಧ್ಯಮಗಳು ಸುಮ್ಮನೆ ಸುದ್ದಿ ಮಾಡ್ತಿದ್ದೀರಿ. ನಿಮ್ಮ ಸಂಪಾದಕರಿಗೆ ಈ ಬಗ್ಗೆ ಹೇಳಿ. ಸುಮ್ಮನೆ ಸುದ್ದಿ ಮಾಡುವುದರಿಂದ ಏನು  ನಿಮಗೇನು ಲಾಭ ಎಂದು ಯಾದಗಿರಿ ಬ್ಯಾಂಕ್​ ಪ್ರಕರಣ ಸಂಬಂಧ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿ, ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಎಚ್​ಡಿಕೆ, ಬೆಳಗ್ಗೆಯಿಂದ ಸುದ್ದಿ ಮಾಡುತ್ತಿದ್ದಿರಾ, ಇದರಿಂದ ಏನು ಪ್ರಯೋಜನ. ರಾಷ್ಟ್ರೀಯ ಬ್ಯಾಂಕ್ ನಿಂದ ಆಗಿರುವ ತಪ್ಪಿಗೆ ನಮ್ಮ ಮೇಲೆ ಯಾಕೆ ದೋಷಣೆ ಮಾಡುತ್ತೀರಾ. ಮೋದಿ ಬಗ್ಗೆ ದಿನಾ ಹೊಗಳುತ್ತೀರಾ ಅಲ್ವಾ. ಇದರ ಬಗ್ಗೆಯೂ ನೀವು ಮಾತಾಡಿ. ರಾಜ್ಯ ಅಭಿವೃದ್ದಿಯಾಗಬೇಕಾ ಅಥವಾ ಹಾಳಾಗಬೇಕಾ ನೀವೇ ನಿರ್ಧಾರ ಮಾಡಿ. ಅಸತ್ಯವನ್ನು ದಿನಾ ತೋರಿಸಿ ಏನ್ ಸಾಧನೆ ಮಾಡುತ್ತೀರಾ. ಈ ಸರ್ಕಾರದ ಮೇಲೆ ಸುಳ್ಳು ಹೇಳಿ ಏನ್ ಮಾಡ್ತೀರಾ. ಮೋದಿನಾ ದಿನಾ ಹೊಗಳುತ್ತೀರಾ. ಹೋಗಿ ಮೋದಿಗೆ ಹೇಳಿ ಎಂದು ಮಾಧ್ಯಮಗಳ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದರು.

ಜನರನ್ನು ತಪ್ಪು ದಾರಿಗೆ ಎಳೆಯಬೇಡಿ. ಅಸತ್ಯವಾಗಿರುದನ್ನು ತೋರಿಸಬೇಡಿ. 800 ರೈತರಿಗೆ ಈ ರೀತಿ ಸಮಸ್ಯೆ ಆಗಿದೆ. ರಾಷ್ಟ್ರೀಕೃತ ಬ್ಯಾಂಕ್ ನಿಂದ ತಪ್ಪಾಗಿರೋದು. ನಮ್ಮಿಂದ ಅಲ್ಲ. ಯಾದಗಿರಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಗಳ ವರ್ಗೀಕರಣ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಉಂಟಾಗಿದೆ ಎಂದು ಸ್ಪಷ್ಟಪಡಿಸಿದರು.

ಪ್ರತಿ ಸಾಲ ಮನ್ನಾ ನಂತರ ರಾಜ್ಯ ಸರ್ಕಾರ ನಡೆಸುವ ಆಡಿಟ್ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈವರೆಗೆ 13988 ರೈತರ ಸಾಲ ಖಾತೆಗಳಲ್ಲಿ ಈ ಗೊಂದಲ ಉಂಟಾಗಿದೆ. ಸ್ಥಳೀಯ ಬ್ಯಾಂಕುಗಳು ತಮ್ಮಿಂದ ಆಗಿರುವ ಲೋಪದ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಾಹ್ನ ಸಭೆ ಕರೆಯಲಾಗಿದೆ. ರೈತರ ಸಾಲ ಮನ್ನಾ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರವು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರದಿಂದ ಈ ಗೊಂದಲ ಉಂಟಾಗಿಲ್ಲ. ಹಾಗೂ ಚುನಾವಣೆಗೂ ಈ ಗೊಂದಲಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.

ವಾಣಿಜ್ಯ ಬ್ಯಾಂಕುಗಳಲ್ಲಿ 7 ಲಕ್ಷ 49 ಸಾವಿರ ರೈತರಿಗೆ ಹಣ ಬಿಡುಗಡೆ ಮಾಡಿದ್ದೇವೆ. 3021 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಸಹಕಾರಿ ಬ್ಯಾಂಕ್ ನಿಂದ ‌ 11ಲಕ್ಷಕ್ಕೂ ಹೆಚ್ಚು ರೈತರಿಗೆ ಹಣ ಬಿಡುಗಡೆ ಮಾಡಿದ್ದೇವೆ. ಈ ರೈತರಿಗೆ 4 ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ‌ಮಾಡಿದ್ದೇವೆ. 2017-18-20ನೇ ಸಾಲಿನಲ್ಲಿ ಸಾಲ ಮನ್ನಾಗೆ 25 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.

ಅಭಿವೃದ್ಧಿಗೆ ಪೂರಕವಾದ ಇಲಾಖೆ ಲೋಕೋಪಯೋಗಿ ಇಲಾಖೆ. ರಾಜ್ಯದ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳು ಒಂದು ಭಾಗ. ಮತ್ತೊಂದು ಭಾಗ ಇಂಜಿನಿಯರ್​ಗಳು. ಕೆಲಸ ನಿರ್ವಹಣೆ ಮಾಡಬೇಕಾದರೆ ಗುಣಾತ್ಮಕ ಯೋಜನೆ ಜಾರಿ ತರಬೇಕು. ಹಿಂದಿನ ನಿಮ್ಮ ಲೋಪಗಳ ಬಗ್ಗೆ ನಾನು ಚರ್ಚೆ ಮಾಡಲ್ಲ. ಇವತ್ತಿನ ಮೈತ್ರಿ ಸರ್ಕಾರದಲ್ಲಿ ಪಾರದರ್ಶಕ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ