ಬಡ ಮಕ್ಕಳ ಉತ್ತಮ ಶಿಕ್ಷಣ, ಮೈಕ್ರೋಸಾಫ್ಟ್ ಸಹಯೋಗದಲ್ಲಿ ರೋಶಿನಿ ಯೋಜನೆ

ಬೆಂಗಳೂರು, ಡಿ.6- ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಆಶಯದಿಂದ ಮೈಕ್ರೋಸಾಫ್ಟ್ ಕಂಪೆನಿ ಸಹಯೋಗದಲ್ಲಿ ರೋಶಿನಿ ಯೋಜನೆಯನ್ನು ರೂಪಿಸಿ ಪಾಲಿಕೆ ಶಾಲೆ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ಬಿಬಿಎಂಪಿಯ ಪ್ರತಿ ಶಾಲೆಗಳಲ್ಲಿ ಶಿಕ್ಷಕರಿಗೆ ನೆರವಾಗಲು ಡಿಡಿ ರೋಶಿನಿ ಶೈಕ್ಷಣಿಕ ಟಿವಿ ವಾಹಿನಿ ಉದ್ಘಾಟಿಸಿ ಮಾತನಾಡಿದ ಅವರು, ಈ ಮಕ್ಕಳಿಗೆ ಇಂಗ್ಲಿಷ್ ಮಾತ್ರವಲ್ಲದೆ, ಖಾಸಗಿ ಶಾಲೆಯಲ್ಲಿನ ಗುಣಮಟ್ಟದ ಶಿಕ್ಷಣದಂತೆ ಶಿಕ್ಷಣ ಒದಗಿಸಲು ಈ ನೂತನ ಪ್ರಯತ್ನ ಮಾಡಲಾಗಿದೆ.

ಪಾಲಿಕೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲೂ ಪ್ರತಿಭೆ ಇದೆ.ಅವರಿಗೆ ಸರಿಯಾದ ಶಿಕ್ಷಣ ಸಿಕ್ಕಿಲ್ಲ. ವಿಜ್ಞಾನಿಗಳಾದ ಸಿ.ಎನ್.ಆರ್.ರಾವ್, ಅಬ್ದುಲ್‍ಕಲಾಂ ಅಂಥವರು ಸರ್ಕಾರಿ ಶಾಲೆಯಲ್ಲೇ ಓದಿದವರು ಎಂದು ಹೇಳಿದರು.

ಉದ್ಯೋಗ ಪಡೆಯಲು ಅಗತ್ಯವಾದ ಕೌಶಲ್ಯ ತರಬೇತಿ ನೀಡಲು ಸರ್ಕಾರ ಸಿದ್ದವಿದೆ.ಶಿಕ್ಷಣ ಕೇವಲ ಓದು ಮಾತ್ರವಲ್ಲ. ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಶಿಕ್ಷಣವಿರಬೇಕು.ಉತ್ತಮ ಭವಿಷ್ಯ ಕಲ್ಪಿಸಿಕೊಂಡು ಪೆÇೀಷಕರನ್ನು ಚೆನ್ನಾಗಿ ನೋಡಿಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಕ್ರಮ ವಹಿಸಲಿದೆ ಎಂದರು.

ಖಾಸಗಿ ಶಾಲೆಗೆ ಸೇರಿಸಿದ್ದ ತಂದೆಯೊಬ್ಬರು ತಮ್ಮ ಮಗುವಿಗೆ ಶೂ ತೆಗೆದುಕೊಡಲು ಸಾಧ್ಯವಾಗದೆ ಮಗುವನ್ನೇ ಸಾಯಿಸಿದ್ದನ್ನು ಓದಿದ್ದೆ.ಅಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಲು ಸರ್ಕಾರ ಸಿದ್ದವಿದೆ.ರೋಶನಿ ಯೋಜನೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಂಡು ಮಕ್ಕಳನ್ನು ಚೆನ್ನಾಗಿ ಓದಿಸಿ ಎಂದು ಸಿಎಂ ಸಲಹೆ ಮಾಡಿದರು.

ಇದೇ ವೇಳೆ ವೀಡಿಯೋ ಕಾನ್ಪರೆನ್ಷ್ ಮೂಲಕ ಪಾಠ ಮಾಡುವುದನ್ನು ಮುಖ್ಯಮಂತ್ರಿ ವೀಕ್ಷಿಸಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಸ್ಮಾರ್ಟ್ ಕ್ಲಾಸ್‍ಗಳನ್ನು ಬಿಬಿಎಂಪಿ ಶಾಲೆಗಳಲ್ಲಿ ಡಿಡಿ ರೋಶಿನಿ ಯೋಜನೆ ಮೂಲಕ ಆಯೋಜಿಸಲಾಗುತ್ತಿದೆ. ಮೈಕ್ರೋಸಾಫ್ಟ್ ಹಾಗೂ ದೂರದರ್ಶನದ ಸಹಯೋಗದಲ್ಲಿ ಬಿಬಿಎಂಪಿ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ಇಂಗ್ಲೀಷ್ ಪಠ್ಯಗಳನ್ನು ವಿಷಯ ತಜ್ಞರು ಆಡಿಯೋ ಹಾಗೂ ವಿಡಿಯೋ ಮೂಲಕ ತಿಳಿಸಿಕೊಡುವ ರೆಕಾರ್ಡ್‍ಡೆಡ್ ವಿಡಿಯೋಗಳನ್ನು ತಲುಪಿಸಲಾಗುತ್ತಿದೆ.

ಇದರೊಂದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ , 10ರಿಂದ 5 ಗಂಟೆ ಹಾಗೂ 5ರಿಂದ ರಾತ್ರಿ 10 ಗಂಟೆವರೆಗೆ ಪ್ರಸಾರ ಮಾಡಲಾಗುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ಮಕ್ಕಳಿಗೆ ಒದಗಿಸಿರುವ ಟ್ಯಾಬ್‍ಗಳ ಮೂಲಕ ಪಾಠ ಪ್ರವಚನ ಕೇಳಬಹುದಾಗಿದೆ.

ಬೆಳಗ್ಗೆ10ರಿಂದ 5ರವರೆಗೆ ಬೋಧನೆ ವೀಕ್ಷಿಸಲು ಶಾಲೆಗಳಲ್ಲಿ 64 ಇಂಚುಗಳ ಎಲ್‍ಸಿಡಿಗೆ ಕಂಪ್ಯೂಟರ್ ಸಂಪರ್ಕ ಕಲ್ಪಿಸಿ ನಿರಂತರ 18 ಗಂಟೆಗಳ ಕಾಲ ದೇಶ, ವಿದೇಶದಲ್ಲಿರುವ ಶೈಕ್ಷಣಿಕ ಮಾಹಿತಿಗಳೂ ಒಳಗೊಂಡಂತೆ ಸ್ಕೈಪ್ ಮೂಲಕ ಶೈಕ್ಷಣಿಕ ಚಾನೆಲ್‍ನಲ್ಲಿ ಪ್ರಸಾರವಾಗಲಿದೆ.
ಒಂದನೇ ತರಗತಿಗೆ ಮೊದಲ ಹಂತದಲ್ಲಿ ಪಠ್ಯದ ಸಾಮಾಗ್ರಿ ಒದಗಿಸಲಾಗಿದ್ದು, ಏಪ್ರಿಲ್‍ನಿಂದ ಪಿಯುಸಿವರೆಗಿನ ಎಲ್ಲ ತರಗತಿಗಳಿಗೆ ಪಾಠ ಆರಂಭಿಸಲು ಸಕಲ ಸಿದ್ದತೆ ನಡೆದಿದೆ.

ಈ ವಿನೂತನ ಮಾದರಿಯ ಶೈಕ್ಷಣಿಕ ಟಿವಿ ವಾಹಿನಿ ಪ್ರಸಾರದ ಮೂಲಕ ಗುಣಮಟ್ಟದ ಶಿಕ್ಷಣ ಒದಗಿಸುವ ಕಾರ್ಯಕ್ರಮಕ್ಕೆ ವಾರ್ಷಿಕ 100 ಕೋಟಿ ಒದಗಿಸಲಾಗುತ್ತಿದ್ದು, ಐದು ವರ್ಷಗಳಿಗೆ ಸಲಕರಣೆ ಸಮೇತ ಎಲ್ಲ ವ್ಯವಸ್ಥೆ ಕಲ್ಪಿಸಲು 500 ಕೋಟಿ ನೀಡಲಾಗುತ್ತಿದೆ.
ಒಟ್ಟಾರೆ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಈ ಅತ್ಯಾಧುನಿಕ ಮಾದರಿಯ ಶಿಕ್ಷಣ ಪದ್ಧತಿಯನ್ನು ಶಾಲೆಗಳಲ್ಲಿ ಅಳವಡಿಸಲಾಗುತ್ತಿದೆ ಎಂದು ಹೇಳಿದರು.

ಪ್ರಾಜೆಕ್ಟ್ ಬಿಬಿಎಂಪಿ ರೋಶಿನಿ ಯೋಜನೆ ಯುನೆಸ್ಕೊದ 2020 ದೃಷ್ಟಿ ಹೊಂದಿದ್ದು, ಪ್ರತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಲು ಹಾಗೂ ಬೋಧನೆಯ ಗುಣಮಟ್ಟ ಸುಧಾರಿಸಲು ತರಗತಿಯಲ್ಲಿ ಸ್ಕೈಪ್ ಬಳಸಿಕೊಂಡು ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಅನುವಾಗಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ದೂರದರ್ಶನ ಪ್ರಸಾರ ಭಾರತಿ ಮಹಾನಿರ್ದೇಶಕರಾದ ಸುಪ್ರಿಯ ಸಾಹು, ದೂರದರ್ಶನ ಹಾಗೂ ಆಕಾಶವಾಣಿ ಅಪರ ಮಹಾನಿರ್ದೇಶಕ ಡಾ.ರಾಜ್‍ಕುಮಾರ್ ಉಪಾಧ್ಯಾಯ್, ಮಾಜಿ ಸಚಿವ ರೋಷನ್ ಬೇಗ್, ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ