ಹೊಸದಿಲ್ಲಿ: ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
”ಮಾಲೇಗಾಂವ್ ಸ್ಫೋಟ ಪ್ರಕರಣದ ಕಳಂಕ ಸಾಧ್ವಿ ಅವರಿಗೆ ಅಂಟಿದೆ. ಅಂತಹವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ದುರದೃಷ್ಟಕರ,” ಎಂದು ಕಾಂಗ್ರೆಸ್ ಹೇಳಿತ್ತು. ”ಸುಳ್ಳು ಆರೋಪಗಳನ್ನು ಮಾಡುವವರ ಮನೆಯಂಗಳವೇ ಸ್ವಚ್ಛವಾಗಿಲ್ಲ. ಜಾಮೀನು ಮೇಲೆ ಇರುವವರು ಅಮೇಠಿ, ರಾಯ್ಬರೇಲಿ ಮತ್ತಿತರೆ ಕಡೆಗಳಲ್ಲಿ ಸ್ಪರ್ಧಿಸಿದ್ದಾರೆ. ಆದರೆ, ಸಾಧ್ವಿ ಪ್ರಜ್ಞಾ ನಿರ್ದೋಷಿಯಾಗಿ ಜೈಲಿನಿಂದ ಬಿಡುಗಡೆಯಾಗಿರುವುದನ್ನು ಮಾತ್ರ ಇವರಿಗೆ ಸಹಿಸಿಕೊಳ್ಳಲಾಗುವುದಿಲ್ಲ. ಒಬ್ಬ ಮಹಿಳೆಗೆ ಈ ರೀತಿ ಕಿರುಕುಳ ನೀಡುವುದನ್ನು ಯಾರೂ ಪ್ರಶ್ನಿಸುವುದೇ ಇಲ್ಲ,” ಎಂದು ಟೈಮ್ಸ್ ನೌ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
”ಕಾಂಗ್ರೆಸ್ ವ್ಯವಸ್ಥಿತ ರೀತಿಯಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತ ಬಂದಿದೆ. ಅದು ಎಸಗುವ ಅಪರಾಧ ಕೃತ್ಯಗಳ ಬಗ್ಗೆ ನನಗೆ ನಿಕಟ ಪರಿಚಯವಿದೆ. ತನಗೆ ಬೇಕಿಲ್ಲದವರ ವಿರುದ್ಧ ತುಂಬ ಜಾಣತನದಿಂದ ಕಟ್ಟುಕತೆ ರೂಪಿಸಿ, ಪ್ರಚಾರ ಮಾಡುವುದು ಅದರ ಚಾಳಿ,” ಎಂದು ಟೀಕಿಸಿದರು.
”1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದಾಗ ಅವರ ಪುತ್ರ ದೊಡ್ಡ ಮರ ಉರುಳಿದಾಗ ಭೂಮಿ ಕಂಪಿಸುವುದು ಸಹಜ ಎಂದು ಹೇಳಿದರು. ಆ ಬಳಿಕ ವ್ಯಾಪಕ ಹಿಂಸಾಚಾರ ಸ್ಫೋಟಿಸಿತು. ಸಾವಿರಾರು ಸಿಖ್ಖರ ಹತ್ಯೆ ನಡೆಯಿತು. ಆದರೂ, ಅದು ಭಯೋತ್ಪಾದನೆ ಅನಿಸುವುದಿಲ್ಲ. ವಿಪರ್ಯಾಸವೆಂದರೆ ಅಂದಿನ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಮಹಾನೀಯರನ್ನೇ ಆ ಪಕ್ಷ ಚುನಾವಣೆಗೆ ಆಯ್ಕೆ ಮಾಡುತ್ತದೆ. ಅನೇಕರು ಸಂಸದರಾಗಿದ್ದಾರೆ, ಮಂತ್ರಿಗಳಾಗಿದ್ದಾರೆ. ಅಂಥವರಲ್ಲಿ ಒಬ್ಬರು ಈಗ ಮಧ್ಯಪ್ರದೇಶದ ಮುಖ್ಯಮಂತ್ರಿಯೂ ಆಗಿದ್ದಾರೆ,” ಎಂದು ತಿರುಗೇಟು ನೀಡಿದರು.