48 ಮಂದಿಗಾಗಿ ಹಿಮದ ನಡುವೆಯೇ ಮತಗಟ್ಟೆ, ಇದು ವಿಶ್ವದಲ್ಲೇ ಅತಿ ಎತ್ತರದ ಚುನಾವಣೆ ಬೂತ್‌!

ಮನಾಲಿ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಮತಕ್ಕೂ ಭಾರಿ ಮಹತ್ವವಿದೆ. ಅತ್ಯಂತ ಕಡಿಮೆ ಮತದಾರರಿದ್ದರೂ ಮತ ಚಲಾವಣೆಗೆ ಮತಗಟ್ಟೆ ಸ್ಥಾಪಿಸಿ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಅಂಡಮಾನ್‌ನಿಂದ ಅತಿಎತ್ತರದ ಯುದ್ಧಭೂಮಿ ಸಿಯಾಚಿನ್‌ ವರೆಗೂ ಮತಗಟ್ಟೆಗಳನ್ನು ಅಳವಡಿಸಲಾಗಿದೆ.

ಇವುಗಳ ನಡುವೆ ವಿಶೇಷವಾಗಿ ಗುರುತಿಸಿಕೊಂಡ ಮತಗಟ್ಟೆ ತಶಿಗಂಜ್. ಇದು ಸದಾ ಹಿಮದಿಂದ ಆವೃತ್ತವಾಗಿರುವ ಹಿಮಾಚಲ ಪ್ರದೇಶದ ಪುಟ್ಟ ಹಳ್ಳಿ. ಈ ಮತಗಟ್ಟೇ ಇದೀಗ ವಿಶ್ವದಲ್ಲೇ ಅತಿ ಎತ್ತರದ ಮತಗಟ್ಟೆ ಎಂಬ ಶ್ಲಾಘನೆಗೆ ಗುರಿಯಾಗಿದೆ. ಸಮುದ್ರ ಮಟ್ಟದಿಂದ 15,256 ಅಡಿ ಎತ್ತರದಲ್ಲಿದೆ.

ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿರುವ ಈ ಹಳ್ಳಿಯಲ್ಲಿರುವ ಮತದಾರರ ಸಂಖ್ಯೆ ಕೇವಲ 48. ಇವರ ಪೈಕಿ 30 ಪುರುಷರು ಮತ್ತು 18 ಮಹಿಳಾ ಮತದಾರರಿದ್ದಾರೆ. ಇಲ್ಲಿ ಮೇ 19ರಂದು ಲೋಕಸಭೆ ಚುನಾವಣೆ ಮತದಾನ ನಡೆಯಲಿದೆ.

ತಶಿಗಂಜ್‌ನ ಪ್ರವಾಸಿ ಲಾಡ್ಜ್‌ವಂದರಲ್ಲಿ ಮತಗಟ್ಟೆಯನ್ನು ತೆರೆಯಲಾಗಿದೆ. ಈ ಕಟ್ಟಡಕ್ಕೆ ಚುನಾವಣೆ ಅಧಿಕಾರಿಗಳು ಮತ್ತು ಮತದಾರರು ತೆರಳಲು ಹಿಮದ ರಾಶಿಯನ್ನು ಬಿಡಿಸಿಕೊಂಡು, ದಾರಿ ನಿರ್ಮಿಸಿಕೊಂಡು ಸಾಗಬೇಕಿದೆ.

ಇದುವರೆಗೆ ಸ್ಪಿತಿಯ ಹಿಕಿಮ್‌ ಅತ್ಯಂತ ಎತ್ತರದ ಮತಗಟ್ಟೆ ಹೊಂದಿರುವ ಪ್ರದೇಶವಾಗಿತ್ತು. ಇದು ಸಮುದ್ರ ಮಟ್ಟದಿಂದ 14,567 ಅಡಿ ಎತ್ತರವಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ