ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅಭಿಮತ – ಕಿಕ್ಕರ್ ಮಲಹೊರುವ ಪದ್ಧತಿ ತಡೆಗೆ ತಂತ್ರಜ್ಞಾನ ಬಳಸಿ

ಬೆಂಗಳೂರು: ಮಲಹೊರುವ ಪದ್ಧತಿಗೆ ಕಡಿವಾಣ ಹಾಕಲು ತಂತ್ರಜ್ಞಾನ ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕಿದೆ ಎಂದು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿಪ್ರಾಯಪಟ್ಟರು.
ಶುಕ್ರವಾರ ಪುರಭವನದಲ್ಲಿ ಕರ್ನಾಟಕ ಸಫಾಯಿ ಕರ್ಮಚಾರಿ ಪರಿಷತ್ ಆಯೋಜಿಸಿದ್ದ ನಮ್ಮ ಹಕ್ಕುಗಳು ಮತ್ತು ಸೌಲಭ್ಯಗಳು ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆ, ಪೊಲೀಸ್ ಇಲಾಖೆ ಸೇರಿದಂತೆ ನಾನಾ ವಿಭಾಗಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ಹಲವು ಮಂದಿಯ ಪ್ರಾಣಾಪಾಯ ತಪ್ಪಿಸಲಾಗಿದೆ. ಇದೇ ರೀತಿ ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಬೇಕಿದೆ. ನಗರಾಭಿವೃದ್ಧಿ ಇಲಾಖೆಯು ಸಫಾಯಿ ಕರ್ಮಚಾರಿ ಕೋ ಅಪರೇಟಿವ್ ಸೊಸೈಟಿಯು ಯೋಜನೆ ರೂಪಿಸಿದ್ದು, ಶೀಘ್ರವೇ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ ಎಂದರು.
ಡಾ.ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ಅವರ ಹೋರಾಟದ ಫಲವಾಗಿ ಸಫಾಯಿ ಕರ್ಮಚಾರಿ ಆಯೋಗ ರಚನೆಯಾಗಿದೆ. ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಸಂಘಟಿತರಾಗಿ ಜಾಗೃತಿಗೊಂಡಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾದ ಅಗತ್ಯ ಇದೆ ಎಂದು ತಿಳಿಸಿದರು. ಪೌರಕಾರ್ಮಿಕ ಹಾಗೂ ಸಫಾಯಿ ಕರ್ಮಚಾರಿಗಳ ಕಷ್ಟ ಜನರಿಗೆ ಗೊತ್ತಾದರೆ, ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಕಾಪೆರ್ರೇಪೊಷನ್‍ಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಫಾಯಿ ಕರ್ಮಚಾರಿಗಳು ಕೊರೊನಾ ವಾರಿಯರ್ಸ್ :
ವೈದ್ಯರಿಂದ ಹಿಡಿದು ಸಫಾಯಿ ಕರ್ಮಚಾರಿಗಳವರೆಗೆ, ಆರೋಗ್ಯ ಕಾರ್ಯಕರ್ತೆರಿಂದ ಹಿಡಿದು ಪೌರಕಾರ್ಮಿಕರವರೆಗೆ, ಪೊಲೀಸರಿಂದ ಹಿಡಿದು ಅರೆ ಸೈನಿಕದಳದವರು ಅಪಾಯಕಾರಿ ಸಂದರ್ಭದಲ್ಲಿ ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಪ್ರಧಾನಿ ನರೇಂದ್ರಮೋದಿ ಅವರು ಕೊರೋನಾ ವಾರಿಯರ್ಸ್ ಎಂದು ಕರೆದಿದ್ದರು. ಇದರಿಂದಾಗಿ ಇಂದು ದೇಶದಲ್ಲಿ ಈ ವರ್ಗಗಳಲ್ಲಿ ಕಾರ್ಯ ನಿರ್ವಹಿಸುವವರನ್ನು ನೋಡುವ ದೃಷ್ಟಿಕೋನ ಬದಲಾಗಿದೆ ಎಂದು ಬಿ.ಎಲ್.ಸಂತೋಷ್ ವಿವರಿಸಿದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ರಮಾ, ಸದಸ್ಯ ಜಗದೀಶ್ ಹಿರೇಮನಿ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ