ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭಾರತದ ಅತ್ಯಂತ ಕೊಳಕು ರಾಜಕಾರಣಿ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್ನ ಪ್ರಗತಿ ಭವನದಲ್ಲಿ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು ಭಾರತದ ಡರ್ಟಿಯಸ್ಟ್ ಪೊಲಿಟಿಶಿಯನ್ ಎಂದು ಗುಡುಗಿದ್ದಾರೆ. ನನ್ನ ಜೀವನದಲ್ಲೇ ಇಂಥ ಕೊಳಕು ರಾಜಕಾರಣಿಯನ್ನು ನಾನು ನೋಡಿಲ್ಲ. ಚಂದ್ರಬಾಬು ನಾಯ್ಡು ಅವರನ್ನು ಸಹಿಸಿಕೊಂಡಿರುವ ಆಂಧ್ರದ ಜನತೆಗೆ ನಾನು ಸಲ್ಯೂಟ್ ಹೊಡೆಯುತ್ತೇನೆ ಎಂದರು.
ನಾಯ್ಡು ಅವಕಾಶವಾದಿ ರಾಜಕಾರಣಿ. ಬೇಕಾದಾಗ ಬಳಸಿಕೊಂಡು ಬೇಡವಾದಾಗ ಎಸೆಯುವ ನಡೆಯಿಂದಲೇ ಅವರು ಖ್ಯಾತಿ ಗಳಿಸಿದ್ದಾರೆ ಎಂದು ಕಿಡಿಕಾರಿದರು.
ನಾಲ್ಕೂವರೆ ವರ್ಷ ಬಿಜೆಪಿ ಜತೆ ಕೈಜೋಡಿಸಿ, ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡಿಈಗ ಕಾಂಗ್ರೆಸ್ನ ರಾಹುಲ್ ಗಾಂಧಿ ಜತೆ ಕೈಜೋಡಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ನಾಯ್ಡು ಅವರ ತೆಲುಗು ದೇಶಂ ಪಕ್ಷ ಹೀನಾಯ ಸೋಲು ಅನುಭವಿಸುತ್ತದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ, ಸ್ಥಳೀಯ ಚುನಾವಣೆಯಲ್ಲಿ ಟಿಆರ್ಎಸ್ ಪಕ್ಷ ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಮಾಡಿದ್ದ ತೆಲಂಗಾಣ ಕಾಂಗ್ರೆಸ್ ನಾಯಕರನ್ನು ಕೆಸಿಆರ್ ಬುದ್ಧಿಗೇಡಿಗಳು ಎಂದು ಜರಿದಿದ್ದಾರೆ.
Chandrababu Naidu, dirtiest politician in India,KCR