ಆಂಧ್ರಕ್ಕೆ ವಿಶೇಷ ಮಾನ್ಯತೆ ನೀಡಲು ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಸಿಎಂ ಚಂದ್ರಬಾಬು ನಾಯ್ಡು

ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಬೇಕು ಮತ್ತು ರಾಜ್ಯ ವಿಭಜನೆಯ ಕಾಲದಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನವದೆಹಲಿಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ ಮತ್ತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನ್ಯಾಯಕ್ಕಾಗಿ ಆಗ್ರಹಿಸಿ ಇಂದು ಇಡೀ ದಿನ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ನವದೆಹಲಿಯ ಆಂಧ್ರಪ್ರದೇಶ ಭವನದಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ನಂತರ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರಿಗೆ ನಾಳೆ ಮನವಿಪತ್ರ ಸಲ್ಲಿಸಲಿದ್ದಾರೆ.

ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಶಾಸಕರು, ವಿಧಾನಪರಿಷತ್​ ಸದಸ್ಯರು, ಸಂಸದರು, ರಾಜ್ಯ ನೌಕರರ ಸಂಘದ ಸದಸ್ಯರು, ಸಾಮಾಜಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಕೂಡ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿವೆ. ಚಂದ್ರಬಾಬು ನಾಯ್ಡು ಅವರು ಇದುವರೆಗೂ ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಈ ರೀತಿಯ ಸತ್ಯಾಗ್ರಹಗಳನ್ನು ನಡೆಸಿದ್ದಾರೆ. ಆದರೆ, ರಾಜ್ಯದಿಂದ ಹೊರಭಾಗದಲ್ಲಿ ನಡೆಸುತ್ತಿರುವ ಮೊದಲ ಸತ್ಯಾಗ್ರಹ ಇದಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ನಾಯ್ಡು ಅವರಿಗೆ ಕೇಂದ್ರ ಸರ್ಕಾರದ ವಿರೋಧಪಕ್ಷದ ನಾಯಕರಾದ ಫಾರೂಕ್ ಅಬ್ದುಲ್ಲಾ, ಅರವಿಂದ್​ ಕೇಜ್ರಿವಾಲ್ ಕೂಡ ಬೆಂಬಲ ಸೂಚಿಸಿದ್ದಾರೆ.

ರಾಜಘಾಟ್​ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಚಂದ್ರಬಾಬು ನಾಯ್ಡು ಆಂಧ್ರ ಭವನದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ. ಆಂಧ್ರಪ್ರದೇಶ- ತೆಲಂಗಾಣ ವಿಭಜನೆಯ ನಂತರ ಆಂಧ್ರಕ್ಕೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಬಿಜೆಪಿ ನೇತೃತ್ವದ ಎನ್​ಡಿಎಯಿಂದ ತೆಲುಗು ದೇಶಂ ಪಾರ್ಟಿ ಹೊರಬಂದು ಬೆಂಬಲ ವಾಪಾಸ್​ ತೆಗೆದುಕೊಂಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ