ಘಾಜಿಪುರ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ:11 ಜನರ ಬಂಧನ

ಲಖನೌ: ಘಾಜಿಪುರದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್‌ ಅಧಿಕಾರಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ.

ಘಾಜಿಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭದ್ರತೆಗೆಂದು ನಿಯೋಜನೆಗೊಂಡಿದ್ದ ಸುರೇಶ್‌ ವತ್ಸ ಎಂಬ ಪೊಲೀಸ್ ಅಧಿಕಾರಿ ಕರ್ತವ್ಯ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ಪ್ರತಿಭಟನಾನಿರತ ಜನಸಮೂಹ ಅವರ ಮೇಲೆ ಕಲ್ಲು ತೂರಾಟ ನಡೆಸಿತ್ತು. ಇದರಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ನಿಶಾದ್‌ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಜಾಗದಿಂದ ತೆರಳುವಂತೆ ಪೊಲೀಸ್ ಪೇದೆಗಳು ಸೂಚಿಸಿದಾಗ ಪ್ರತಿಭಟನಾ ನಿರತರು ಕಲ್ಲು ತೂರಾಟ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಕಲ್ಲು ತಲೆಗೆ ಬಿದ್ದು ಪೊಲೀಸ್‌ ಅಧಿಕಾರಿ ಮೃತಪಟ್ಟಿದ್ದಾರೆ.

ಗೋ ಹತ್ಯೆಯ ಅನುಮಾನದ ಮೇರೆಗೆ ಡಿ. 3ರಂದು ಇನ್ಸ್​ಪೆಕ್ಟರ್‌ ಸುಬೋಧ್‌ ಕುಮಾರ್ ಸಿಂಗ್ ಎಂಬವರನ್ನು ಇದೇರೀತಿ ಬುಲಂದ್‌ಶಹರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇದು ಎರಡನೇ ಘಟನೆಯಾಗಿದ್ದು, ನಿಶಾದ್‌ ಪಕ್ಷದ ಮುಖ್ಯಸ್ಥ ಸಂಜಯ್ ಕುಮಾರ್ ನಿಶಾದ್ ಅವರು ತಮ್ಮ ಕಾರ್ಯಕರ್ತರು ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ನಿರಾಕರಿಸಿದ್ದಾರೆ.

ಇನ್ನು ಮೃತ ಪೊಲೀಸ್‌ ಅಧಿಕಾರಿಯ ಪುತ್ರ ವಿ ಪಿ ಸಿಂಗ್‌ ಮಾತನಾಡಿ, ಪೊಲೀಸ್‌ ಅಧಿಕಾರಿಗಳೇ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಗುತ್ತಿಲ್ಲ ಎಂದರೆ ಬೇರೆ ಇನ್ನೇನನ್ನು ನಿರೀಕ್ಷಿಸಬಹುದು. ಪರಿಹಾರವನ್ನಿಟ್ಟುಕೊಂಡು ನಾವೇನು ಮಾಡೋಣ? ಇದೇ ರೀತಿಯ ಘಟನೆಯು ಬುಲಂದ್‌ಶಹರ್‌ನಲ್ಲಿಯೂ ನಡೆದಿತ್ತು ಎಂದು ತಿಳಿಸಿದ್ದಾರೆ.

11 arrested, policeman killed, stone throwing, ghazipur violence

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ