ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಸರ್ಕಾರ ನಿಲ್ಲಿಸಬೇಕು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಜು.17- ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಸರ್ಕಾರ ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಜೆಡಿಎಸ್ ಕೇಂದ್ರ ಕಚೇರಿ ಜೆಪಿಭವನದಲ್ಲಿ ಜಿಲ್ಲಾವಾರು ಸಭೆಗಳನ್ನು ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ನಾನು ಮತ್ತು ನಮ್ಮ ಪಕ್ಷದ ಬೆಂಬಲವಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ದೆಹಲಿಗೆ ಹೋಗಿ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಮನವಿಗೆ ಯಾವ ರೀತಿ ಕೇಂದ್ರ ಸರ್ಕಾರ ಪುರಸ್ಕರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನಿನ್ನೆ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ದೆಹಲಿಗೆ ತೆರಳಿದ್ದು, ಅವರೊಂದಿಗೆ ಆರು ಬ್ಯಾಗುಗಳಿದ್ದವು ಎಂಬ ಮಾಹಿತಿ ಇದೆ. ಬ್ಯಾಗುಗಳಲ್ಲಿ ರಾಜ್ಯದ ಸಮಸ್ಯೆಗಳಿಗೆ ಸಂಬಂಧಿಸಿದ ವಿಚಾರಗಳಿದ್ದವೋ ಅಥವಾ ಬೇರೆನಿತ್ತು ಎಂಬುದು ಗೊತ್ತಿಲ್ಲ.

ಕೇಂದ್ರ ಸಚಿವರು ರಾಜ್ಯಕ್ಕೆ ಬಂದಿದ್ದು ಜಲ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆಗಾಗಿಯೇ ಹೊರತು ಮೇಕೆದಾಟು ಅಥವಾ ಮಹಾದಾಯಿ ವಿಚಾರವಾಗಿ ಅಲ್ಲ ಎಂದು ನಾನು ಹೇಳಿದ್ದೆ. ಆ ಸಚಿವರು ದೆಹಲಿಗೆ ಹೋದ ಮೇಲೆ ಯಾವ ರೀತಿಯ ಹೇಳಿಕೆ ನೀಡಿದ್ದಾರೆ ಎಂಬುದನ್ನು ಗಮನಿಸಬಹುದು.

ಆದರೆ ದೊಡ್ಡ ದೊಡ್ಡ ಉಡುಗೊರೆಯೊಂದಿಗೆ ದೆಹಲಿಗೆ ಹೋಗಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದರು.

ಕನ್ನಡಿಗರ ಆಡಳಿತ ಕನ್ನಡಿಗರಿಂದ:
ಪ್ರಾದೇಶಿಕ ನೆಲೆಗಟ್ಟಿನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಜನರ ಮುಂದಿಟ್ಟು, ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಯಬೇಕು. ಆ ನಿಟ್ಟಿನಲ್ಲಿ ಕನ್ನಡಿಗರ ಆಡಳಿತ ಕನ್ನಡಿಗರಿಂದ ಎಂಬ ಘೋಷ ವಾಕ್ಯದೊಂದಿಗೆ ಜನಾಂದೋಲನ ನಡೆಸಲು ಉದ್ದೇಶಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮುಂದಿನ ಜನವರಿಯಿಂದ ಒಂದು ವರ್ಷ ಆಂದೋಲನದ ರೀತಿಯಲ್ಲಿ ನಮ್ಮ ಪಕ್ಷದ ಐದು ಪ್ರಮುಖ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿ ಜನರ ವಿಶ್ವಾಸಗಳಿಸುವ ಪ್ರಯತ್ನ ಮಾಡಲಾಗುವುದು. ಈಗಾಗಲೇ ಪ್ರಮುಖ 5 ಕಾರ್ಯಕ್ರಮಗಳ ಬಗ್ಗೆ ಸಿದ್ದತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಸೆಮಿಫೈನಲ್: ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳು ನಮಗೆ ಸೆಮಿಫೈನಲ್ ಚುನಾವಣೆ ಇದ್ದ ಹಾಗೆ. ಈ ಚುನಾವಣೆಗಳಲ್ಲಿ ಹೆಚ್ಚಿನ ಹೋರಾಟ ಮಾಡಲಾಗುತ್ತಿದೆ. ಕಾರ್ಯಕರ್ತರಲ್ಲೂ ಹೆಚ್ಚಿನ ಹುಮಸ್ಸು ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.

ಹೀಗಾಗಿ ಬಿಬಿಎಂಪಿ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶ್ರಮ ವಹಿಸುವಂತೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ಚುನಾವಣೆಗೆ ಸಂಬಂಧಿಸಿದಂತೆ ಹಲವು ವೃತ್ತಿನಿರತರ ಸಲಹೆಗಳನ್ನು ಪಡೆಯಲಾಗುವುದು ಎಂದರು.

ಕಳೆದ ಮೂರು ದಿನಗಳಿಂದ ಜಿಲ್ಲಾವಾರು ಸಭೆಗಳನ್ನು ನಡೆಸಲಾಗುತ್ತಿದ್ದು, ನಿಷ್ಠಾವಂತ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಹುಮ್ಮಸ್ಸು ತೋರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆಯಾ ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ಚರ್ಚೆ ಮಾಡಿ ಪಕ್ಷ ಸಂಘಟನೆಗೆ ಯಾವ ರೀತಿ ರೂಪುರೇಷೆ ರೂಪಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡು ಓಡಾಡುವ ಪದಾಧಿಕಾರಿಗಳು ನಮಗೆ ಬೇಕಿಲ್ಲ. ಪಕ್ಷದ ನಾಯಕರು ನೀಡುವ ಸಲಹೆಸೂಚನೆಗಳನ್ನು ಆಧರಿಸಿ ಪಕ್ಷ ಸಂಘಟನೆ ಮಾಡುವವರು ಬೇಕಾಗಿದೆ. ಉಪಚುನಾವಣೆಗಳಲ್ಲಿ ಜೆಡಿಎಸ್ ಒಂದೂ ಸ್ಥಾನವನ್ನು ಗೆದ್ದಿಲ್ಲ. ಹೀಗಾಗಿ ಜೆಡಿಎಸ್ ಕತೆ ಮುಗಿದು ಹೋಯಿತು. ಜೆಡಿಎಸ್‍ನಲ್ಲಿ ಭವಿಷ್ಯವಿಲ್ಲ ಎಂಬ ರೀತಿಯಲ್ಲಿ ಚರ್ಚೆಗಳಾದವು. ಆದರೆ ನಿಷ್ಠಾವಂತ ಕಾರ್ಯಕರ್ತರು ಪಕ್ಷ ಕಟ್ಟಲು ಮುಂದಾಗಿದ್ದಾರೆ.

ಕೊಪ್ಪಳದಲ್ಲಿ ಹೊಸ ಯುವಕರು, ವಕೀಲ ವೃತ್ತಿ ಮಾಡುವವರು ಹಾಗೂ ಟಿಕೆಟ್‍ನಿಂದ ವಂಚಿತರಾದವರು ಪಕ್ಷ ಕಟ್ಟುವ ಸವಾಲನ್ನು ಸ್ವೀಕರಿಸಿ ಮುಂದೆ ಬಂದಿದ್ದಾರೆ. ಜಿಲ್ಲಾವಾರು ಸಭೆಗಳನ್ನು ನಡೆಸುತ್ತಿರುವುದರಿಂದ ಪಕ್ಷದ ಬಲವರ್ಧನೆಗೆ ಆಶಾದಾಯಕ ಬೆಳವಣಿಗೆಗಳು ಕಂಡುಬರುತ್ತಿವೆ ಎಂದು ಕುಮಾರಸ್ವಾಮಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ