ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಇಂದಿಗೆ 26 ವರ್ಷ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಇಂದು ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ವಿಶ್ವ ಹಿಂದು ಪರಿಷತ್, ಬಜರಂಗದಳ ಸೇರಿ ಅನೇಕ ಹಿಂದು ಸಂಘಟನೆಗಳು ಈ ದಿನವನ್ನು ‘ಶೌರ್ಯದ ದಿನ’ ಹಾಗೂ ‘ವಿಜಯದ ದಿನ’ ಎಂದು ಆಚರಣೆ ಮಾಡುತ್ತಿವೆ. ಇನ್ನು, ಮುಸ್ಲಿಂ ಸಂಘಟನೆಗಳು ಈ ದಿನವನ್ನು ‘ಕಪ್ಪು ದಿನ’ ಎಂದು ಘೋಷಿಸಿವೆ.
ವಿವಾದಿತ ಸ್ಥಳ ಸೇರಿದಂತೆ ಅಯೋಧ್ಯೆಯಲ್ಲಿ ಬರೋಬ್ಬರಿ 2,500 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ‘ಅಯೋಧ್ಯೆ ಹಾಗೂ ಫೈಜಾಬಾದ್ನಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ. ವಿವಾದಿತ ಸ್ಥಳದಲ್ಲಿ ಕಾಣಿಸಿಕೊಂಡ ನಾಲ್ವರು ಹಿಂದು ಕಾರ್ಯಕರ್ತರನ್ನು ಬುಧವಾರ ಬಂಧಿಸಲಾಗಿದೆ. ಸಿಆರ್ಪಿಎಫ್ ಹಾಗೂ ಆರ್ಎಎಫ್ ತುಕಡಿಗಳನ್ನು ನಗರದಲ್ಲಿ ನಿಯೋಜನೆ ಮಾಡಲಾಗಿದೆ’ ಎಂದು ಫೈಜಾಬಾದ್ ಎಸ್ಪಿ ಅನಿಲ್ ಸಿಂಗ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಇನ್ನು, ವಿಶ್ವ ಹಿಂದು ಪರಿಷತ್ ಅಯೋಧ್ಯೆಯಲ್ಲಿ ಇಂದು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬಾಬ್ರಿ ಮಸೀದಿ ಧ್ವಂಸ ಮಾಡಿದ ದಿನವನ್ನು ದೀಪಾವಳಿ ಹಬ್ಬದಂತೆ ಆಚರಿಸಬೇಕು ಎನ್ನುವ ಉದ್ದೇಶ ಹಿಂದು ಸಂಘಟನೆಗಳದ್ದು.
ಏನಿದು ಘಟನೆ?:
ಮೊಘಲರ ಕಾಲದಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕಟ್ಟಲಾಗಿತ್ತು. ರಾಮ ಮಂದಿರವನ್ನು ಕೆಡವಿ ಬಾಬ್ರಿ ಮಸೀದಿ ಕಟ್ಟಲಾಗಿದೆ ಎಂದು ಹಿಂದುಗಳು ಆರೋಪಿಸಿದ್ದರು. 1984ರಲ್ಲಿ ವಿಶ್ವ ಹಿಂದು ಪರಿಷತ್ ಈ ವಿಚಾರದಲ್ಲಿ ಸಾರ್ವಜನಿಕರ ಬೆಂಬಲ ತೆಗೆದುಕೊಳ್ಳಲು ಆಂದೋಲನ ಆರಂಭಿಸಿತ್ತು. ನಂತರ ಈ ವಿಚಾರ ಕೋರ್ಟ್ ಮೆಟ್ಟಿಲೇರಿತು. 1992ರಲ್ಲಿ ಅನೇಕ ಹಿಂದು ಕಾರ್ಯಕರ್ತರು ಬಾಬ್ರಿ ಮಸೀದಿಯನ್ನು ಕೆಡವಿದರು. ಇದರಿಂದ ದೇಶಾದ್ಯಂತ ಸಾಕಷ್ಟು ಹಿಂಸಾಚಾರಗಳು ನಡೆದವು. ಸದ್ಯ ಸುಪ್ರೀಂಕೋರ್ಟ್ ವಿವಾದಿತ ಸ್ಥಳದ ಬಗ್ಗೆ ವಿಚಾರಣೆ ನಡೆಸುತ್ತಿದೆ.