ನನ್ನನ್ನು ದೂರಲಿಲ್ಲ ಎಂದರೆ ಕೆಲವರಿಗೆ ನಿದ್ದೆ ಬರಲ್ಲ; ಸಚಿವ ಎಚ್​. ಡಿ. ರೇವಣ್ಣ

ಹಾಸನ: ಸರ್ಕಾರದ ಅನೇಕ ಇಲಾಖೆಗಳಲ್ಲಿ ಲೋಕೋಪಯೋಗಿ ಸಚಿವ ಎಚ್​.ಡಿ ರೇವಣ್ಣ ಹಸ್ತಕ್ಷೇಪ ಕುರಿತು ನಿನ್ನೆ ನಡೆದ ಸಮನ್ವಯ ಸಮಿತಿಯಲ್ಲಿ ದೂರು ಕೇಳಿ ಬಂದ ಹಿನ್ನಲೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವರು, ನಾನು ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ ರೇವಣ್ಣ, ಹಾಸನ ಜಿಲ್ಲೆಯಲ್ಲಿ ಮಾತ್ರ ಅಧಿಕಾರಿಗಳ ವರ್ಗಾವಣೆಯಾಗಿದೆ. ಅದು ನನ್ನ ಇಲಾಖೆಯಲ್ಲಿ ಮಾತ್ರ. ಹಿಂದಿನ ಸರ್ಕಾರದಲ್ಲಿದ್ದ ಅಧಿಕಾರಿಗಳೇ ಈಗಲೂ ಮುಂದುವರೆದಿದ್ದಾರೆ.

ಈ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರು ನನ್ನನ್ನ ಕರೆದು ಕೇಳಿದರೆ ನಾನೂ ಉತ್ತರ ಕೊಡುತ್ತೇನೆ. ಈ ಬಗ್ಗೆ ನಾನು ಯಾಕೆ ಸಿಟ್ಟಾಗಲಿ. ಕೆಲವರಿಗೆ ನನ್ನ ಹೆಸರು ಹೇಳದಿದ್ದರೆ ನಿದ್ದೆ ಬರಲ್ಲ. ನಾನು ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದರೆ ನನ್ನನ್ನು ಕರೆಸಲಿ ನಾನೇ ಉತ್ತರ ಕೊಡುತ್ತೇನೆ ಎಂದು ಖಾರವಾಗಿ ತಿಳಿಸಿದರು.

ಹಾಸನದಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸುತ್ತೇನೆ. ತೆಂಗು ಬೆಳೆಗಾರರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡುವೆ, ಆಲೂಗಡ್ಡೆ ಖರೀದಿಗೆ ಹೊಸ ನೀತಿ, ರೈತರೇ ನೇರವಾಗಿ ಆಲೂಗಡ್ಡೆ ಖರೀದಿಸಲು ಚಿಂತನೆ, ಆನೆ ಹಿಡಿಯಲು ಸಿಎಂ ಸಭೆ  ಮಾಡಿದ್ದಾರೆ. ಶ್ರೀಲಂಕಾದಿಂದಲೂ ಆನೆ ತಜ್ಞರನ್ನು ಕರೆಸಿ ರಾಜ್ಯದಲ್ಲಿ ಕಾಡಾನೆ ಹಿಡಿಯಲು ಚಿಂತನೆ ನಡೆದಿದ್ದು, ಅಧಿವೇಶನದ ಬಳಿಕ ಸಿಎಂ ದೆಹಲಿಗೆ ತೆರಳಿ ಆನೆ ಕಾರಿಡಾರ್ ಬಗ್ಗೆ ಚರ್ಚಿಸುತ್ತೇನೆ ಎಂದರು.

ಕಾಂಗ್ರೆಸ್​ ಸರ್ಕಾರ ಅವಧಿಯಲ್ಲಿನ ವಿವಿಧ ರಾಷ್ಟ್ರೀಯ ಹೆದ್ಧಾರಿ ಯೋಜನೆಗೆ ಚಾಲನೆ ನೀಡಿ, ತಮ್ಮ ಯೋಜನೆಯೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂಬ  ಮಾಜಿ ಸಚಿವ ಬಿ.ಶಿವರಾಮ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದಿನ ದಿನಗಳಲ್ಲಿ ಮಂಜೂರಾದ ಆದೇಶ ಪತ್ರ ಇದ್ರೆ ಕೊಡಲಿ ಎಂದು ಸವಾಲ್ ಹಾಕಿದರು.

ಎಲ್ಲವೂ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಈ ಎಲ್ಲಾ ಕಾಮಗಾರಿಗಳು ಮಂಜೂರಾಗಿದೆ. ನಾವೆಲ್ಲಾ ಅಣ್ಣಾ ತಮ್ಮಂದಿರುವ ಈ ಕುರಿತು ಜಗಳ ಆಡುವುದಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ