ಕರ್ತಾರ್ ಪುರ ಇಂದು ಪಾಕ್ ನಲ್ಲಿರಲು ಕಾಂಗ್ರೆಸ್ ದೂರದೃಷ್ಠಿ ಕೊರತೆ ಕಾರಣ: ಪ್ರಧಾನಿ ಮೋದಿ ವಾಗ್ದಾಳಿ

ಹನುಮಾನ್ಗರ್ಹ್: ಕರ್ತಾರ್ ಪುರ ಇಂದು ಪಾಕಿಸ್ತಾನದಲ್ಲಿರಲು ಕಾಂಗ್ರೆಸ್ ನಾಯಕರ ಸೂಕ್ಷ್ಮತೆ ಇಲ್ಲದಿರುವುದು ಹಾಗೂ ದೂರದೃಷ್ಟಿ ಕೊರತೆಯೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದ ಹನುಮಾನ್ಗರ್ಹ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸೂಕ್ಷ್ಮತೆ ಇಲ್ಲದಿರುವುದು ಹಾಗೂ ದೂರ ದೃಷ್ಟಿಯ ಕೊರತೆಯ ಕಾರನದಿಂದಾಗಿಯೇ ಇಂದು ಕರ್ತಾರ್ಪುರ ಪಾಕಿಸ್ತಾನದ ಪಾಲಾಗಿದೆ ಎಂದರು.

ಗುರು ನಾನಕ್ ದೇವ್ ಅವರ ಪ್ರಾಮುಖ್ಯತೆ ಬಗ್ಗೆ ಕಾಂಗ್ರೆಸ್’ಗೆ ಯಾವುದೇ ರೀತಿಯ ಕಲ್ಪನೆಗಳೂ ಇರಲಿಲ್ಲ ಅಲ್ಲದೇ ಸಿಖರ ಭಾವನೆಗಳಿಗೆ ಕಾಂಗ್ರೆಸ್ ಎಂದಿಗೂ ಗೌರವವನ್ನು ನೀಡುವುದಿಲ್ಲ. ಹೀಗಾಗಿಯೇ ಕರ್ತಾರ್ಪುರ ಇಂದು ಪಾಕಿಸ್ತಾನದಲ್ಲಿದೆ ಎಂದು ತಿಳಿಸಿದ್ದಾರೆ.

ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಶಂಕು ಸ್ಥಾಪನಾ ಕಾರ್ಯಕ್ರಮಕ್ಕಾಗಿ ಭಾರತವನ್ನು ಪ್ರತಿನಿಧಿಸಲು ಪಾಕಿಸ್ತಾನಕ್ಕೆ ತೆರಳಿದ್ದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯವರು ಈ ಹಿಂದೆ ಹೇಳಿಕೆಯೊಂದನ್ನು ನೀಡಿದ್ದರು. ಹಲವು ವರ್ಷಗಳ ಹಿಂದೆಯೇ ಕರ್ತಾರ್ಪುರ ಕಾರಿಡಾರ್ ಯೋಜನೆ ಆಗಬೇಕಿತ್ತು. ಗಡಿ ರೇಖೆ ಹಾಕಿದ್ದ ವ್ಯಕ್ತಿ ಮೂಲಭೂತ ತಪ್ಪು ಮಾಡಿದ್ದ ಎಂದು ಹೇಳಿದ್ದರು.

70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಗೆ ಕರ್ತಾರ್ ಪುರ ಕಾರಿಡಾರ್ ಯೋಜನೆಯನ್ನು ಜಾರಿಗೆ ತರಲು ಏಕೆ ಸಾಧ್ಯವಾಗಲಿಲ್ಲ ಎಂಬುದನ್ನು ಕಾಂಗ್ರೆಸ್ ಉತ್ತರಿಸಬೇಕು ಎಂದು ಮೋದಿ ಆಗ್ರಹಿಸಿದ್ದಾರೆ.

Kartarpur Sahib in Pakistan today because of then Cong leaders’ lack of vision,PM Narendra Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ