ಉದ್ಯಮಿಗಳು ನಮ್ಮ ದೇಶದ ಬೆಳವಣಿಗೆಯ ರಾಯಭಾರಿಗಳು-ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ, ಆ.12-ಉದ್ಯಮಿಗಳು ನಮ್ಮ ದೇಶದ ಬೆಳವಣಿಗೆಯ ರಾಯಭಾರಿಗಳು ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತವನ್ನು ಉದ್ಯಮಕ್ಕಾಗಿ ಅತ್ಯಂತ ಸೂಕ್ತ ಮತ್ತು ಪ್ರಶಸ್ತ ಸ್ಥಳವನ್ನಾಗಿ ಮಾಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ.

ಸದೃಢ ಸರ್ಕಾರದೊಂದಿಗೆ ಬಲಿಷ್ಠ ಆರ್ಥಿಕ ಬುನಾದಿಯಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ನಾನು ದೃಢ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಅವರು ವಿಶ್ವಾಸ ತುಂಬಿದ ಮಾತುಗಳಲ್ಲಿ ತಿಳಿಸಿದ್ದಾರೆ.

ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ದೇಶದ ಆರ್ಥಿಕ ಬೆಳವಣಿಗೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ವಿವರಿಸಿದರು.

ಇಂದಿನ ವಿಶ್ವದಲ್ಲಿ ಅಭಿವೃದ್ಧಿ, ಆರ್ಥಿಕ ಬೆಳವಣಿಗೆ ಅಥವಾ ರಾಜಕೀಯ ಸ್ಥಿರತೆ ವಿಷಯಗಳ ಬಗ್ಗೆ ಯಾವುದೇ ಚರ್ಚೆ ಅಥವಾ ಸಂವಾದಗಳು ನಡೆದಾಗ ಜಗತ್ತಿನ ಗಮನ ಭಾರತದೆಡೆಗೆ ಹರಿಯುತ್ತದೆ.

ನಿರೀಕ್ಷೆಗಳು ಕೇವಲ ಭಾರತದ ಮಟ್ಟದಲ್ಲಿ ಮಾತ್ರ ಇಲ್ಲ. ಪ್ರಗತಿ ವಿಷಯದಲ್ಲಿ ಇಡೀ ಪ್ರಪಂಚದ ಪ್ರತೀಕ್ಷೆಗಳು ನಮ್ಮ ದೇಶದತ್ತ ಹೊರಳಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸರ್ಕಾರದ ಪರವಾಗಿ ಲಭಿಸಿದ ಪ್ರಚಂಡ ಬಹು ಮತವು ದೇಶದ ಪ್ರಗತಿ ಪಥ ಮತ್ತಷ್ಟು ವೇಗವಾಗಿ ಸಾಗಲು ನೀಡಿದ ಜನಾದೇಶವಾಗಿದೆ ಎಂದು ಅವರು ತಿಳಿಸಿದರು.

ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರದ ಸಾಧನೆಗಳು ಮತ್ತು ಪ್ರಗತಿ ಕಾರ್ಯಕ್ರಮಗಳು ನಮ್ಮ ಕೆಲಸದ ಗರಿಷ್ಠತೆ, ವೇಗ ಮತ್ತು ದಿಕ್ಕನ್ನು ಸಾಬೀತು ಮಾಡಿದೆ.

ಇದನ್ನು ಮುಂದುವರಿಸಲು ನಮಗೆ ಮತ್ತೊಮ್ಮೆ ಜನಾದೇಶ ಲಭಿಸಿದೆ. ನಮ್ಮ ಮೇಲೆ ದೇಶದ ಮತ್ತು ಜಗತ್ತಿನ ಭರವಸೆಗಳು ಮತ್ತು ನಿರೀಕ್ಷೆಗಳೂ ಹೆಚ್ಚಾಗಿವೆ.

ಇವುಗಳೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡು ನಾವು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತಷ್ಟು ವೇಗ ಮತ್ತು ಉತ್ತಮ ಯೋಜನೆಗಳೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಪ್ರಧಾನಿ ವಿವರಿಸಿದರು.

ದೇಶದ ಉದ್ಯಮಿಗಳನ್ನು ನಾನು ಭಾರತದ ಪ್ರಗತಿಯ ರಾಯಭಾರಿಗಳು ಎಂದೇ ನಾನು ಪರಿಗಣಿಸಿದ್ದೇನೆ. ನಮ್ಮ ದೇಶವು ಸುಗಮ ಉದ್ಯಮ ನಡೆಸಲು ಮತ್ತು ಬಂಡವಾಳ ಹೂಡಲು ಸೂಕ್ತ ಸ್ಥಳ ಎಂಬುದನ್ನು ಸಾಬೀತು ಮಾಡಲು ನಾವು ಶ್ರಮಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಭಾರತಕ್ಕೆ ಅಮೆರಿಕ ಮತ್ತು ಚೀನಾ ಒಡ್ಡಿರುವ ವಾಣಿಜ್ಯ ಪೈಪೋಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದಲ್ಲಿ ವಿಫುಲ ಸಂಪನ್ಮೂಲವಿದೆ.

ಅತ್ಯುತ್ತಮ ಕುಶಲ ಮತ್ತು ನುರಿತ ಮಾನವ ಸಂಪನ್ಮೂಲವಿದೆ. ನಮ್ಮ ದೇಶದ ಮೂಲ ಸೌಕರ್ಯಾಭಿವೃದ್ದಿ ವಿಶ್ವ ಶ್ರೇಷ್ಠ ಮಟ್ಟದಲ್ಲಿ ವೃದ್ದಿಯಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಲೂ ನಮ್ಮ ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ