ರಾಜೀನಾಮೆ ನೀಡಲು ಮುಂದಾದರೇ ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್

ನವದೆಹಲಿ: ಆರ್ ಬಿಐ ಹಾಗೂ ಕೇಂದ್ರ ಸರ್ಕಾರದ ಸಂಘರ್ಷ ಮುಂದುವರೆದಿದ್ದು, ಈ ಭಿನ್ನಮತ ತಿಳಿಯಾಗದಿದ್ದಲ್ಲಿ ನ.19ರಂದು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಈ ನಡುವೆ ಆರ್‌ಬಿಐ ಜತೆಗಿನ ಸಂಘರ್ಷ ಬಗೆಹರಿಸಲು ಕೇಂದ್ರ ಸರಕಾರ ನವೆಂಬರ್‌ 19ರಂದು ಆರ್‌ಬಿಐ ಮಂಡಳಿ ಸಭೆಕರೆದಿದ್ದು, ಸಭೆಯಲ್ಲಿ ಸೆಕ್ಷನ್‌ 7 ರ ಅಡಿಯಲ್ಲಿ ಚರ್ಚೆ ನಡೆಸುವ ನಿರೀಕ್ಷೆ ಇದೆ.

ನ.19ರ ಸಭೆ ಹೆಚ್ಚಿನ ಮಹತ್ವ ಪಡೆದಿದ್ದು, ಸರಕಾರದೊಂದಿಗಿನ ಸಂಘರ್ಷ ಮತ್ತು ಅನಾರೋಗ್ಯದ ಕಾರಣಗಳಿಂದ ಉರ್ಜಿತ್‌ ಅಧಿಕಾರ ತೊರೆಯಲಿದ್ದಾರೆ ಎಂದೂ ಕೂಡ ವರದಿಗಳಲ್ಲಿ ಹೇಳಲಾಗಿದೆ.

ಇನ್ನು ಸರಕಾರ ಮತ್ತು ಆರ್‌ಬಿಐ ನಡುವಿನ ತಿಕ್ಕಾಟ ಕುರಿತು ಪ್ರತಿಕ್ರಿಯಿಸಿರುವ ಆರ್‌ಬಿಐ ಮಾಜಿ ಗರ್ವನರ್‌ ರಘುರಾಮ್‌ ರಾಜನ್‌, ‘‘ಪ್ರಸಕ್ತ ಪರಿಸ್ಥಿತಿಯಲ್ಲಿ ಆರ್‌ಬಿಐ ರಾಹುಲ್‌ ದ್ರಾವಿಡ್‌ರಂತೆ ಆಡಬೇಕೆ ಹೊರತು, ನವಜೋತ್‌ ಸಿಂಗ್‌ ಸಿಧು ರೀತಿ ಅಬ್ಬರಿಸುವುದು ಒಳ್ಳೆಯದಲ್ಲ,’’ ಎಂದು ಕ್ರಿಕೆಟ್‌ ಪರಿಭಾಷೆಯಲ್ಲಿ ಹೇಳಿದ್ದಾರೆ.

ಅಲ್ಲದೇ, ಆರ್‌ಬಿಐ ಅನ್ನುವುದು ಸರಕಾರಕ್ಕೆ ಸೀಟ್‌ ಬೆಲ್ಟ್‌ ಇದ್ದಂತೆ. ಅದಿಲ್ಲದೇ ಹೋದರೆ ಅಪಘಾತವಾಗುತ್ತದೆ,’ ಎಂದು ಸರಕಾರಕ್ಕೆ ಮಾರ್ಮಿಕವಾಗಿ ಎಚ್ಚರಿಸಿದ್ದಾರೆ. ಇದೇ ವೇಳೆ, ಆರ್‌ಬಿಐ ಸ್ವಾಯತ್ತತೆ ವಿಷಯದಲ್ಲಿ ಸರಕಾರದ ನೀತಿಯನ್ನು ಖಂಡಿಸಿದ್ದ ಡೆಪ್ಯುಟಿ ಗವರ್ನರ್‌ ವಿರಳ್‌ ಆಚಾರ್ಯ ಅವರ ನಡೆಯನ್ನೂ ರಾಜನ್‌ ಸಮರ್ಥಿಸಿದ್ದಾರೆ.

RBI,Governor Urjit Patel,PM Narendra modi,Raguram rajan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ